

| ರಾಯಣ್ಣ ಆರ್.ಸಿ.ಬೆಂಗಳೂರು
ಕೇಂದ್ರ ಸರ್ಕಾರವು 2023-24ನೇ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಕಬ್ಬು ಬೆಳೆಗಾರರಿಗೆ ಮತ್ತಷ್ಟು ಪ್ರಯೋಜನವಾಗಲಿ ಎಂಬ ಉದ್ದೇಶದಿಂದ ಪ್ರತಿಟನ್ ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್ಆರ್ಪಿ) 3,150 ರೂ. ನೀಡಬೇಕು ಎಂದು ನಿಗದಿ ಮಾಡಿದೆ.
ಇದರಿಂದ ಕಬ್ಬು ಬೆಳಗಾರರ ಆರ್ಥಿಕ ಸ್ಥಿತಿ ಸುಧಾರಿಸಲು ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. 2023-24ನೇ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮು ಆರಂಭಕ್ಕೆ 20 ದಿನ ಮಾತ್ರ ಬಾಕಿಯಿದೆ. 2023-24ರ ಸಕ್ಕರೆ ಹಂಗಾಮಿಗೆ ನಿಗದಿಪಡಿಸಿರುವ ಎಫ್ಆರ್ಪಿಯು ಕಳೆದ ಸಾಲಿನ (2022-23ರ) ಸಕ್ಕರೆ ಹಂಗಾಮಿಗಿಂತ ಶೇ.3.28 ಅಧಿಕವಾಗಿದೆ. ಸಕ್ಕರೆ ವಲಯವು ದೇಶದ ಪ್ರಮುಖ ಕೃಷಿ ಆಧಾರಿತ ವಲಯವಾಗಿದೆ. ಇದು ದೇಶದ 5 ಕೋಟಿ ಕಬ್ಬು ಬೆಳೆಗಾರರು ಮತ್ತು ಅವರ ಅವಲಂಬಿತರು ಮತ್ತು ಸಕ್ಕರೆ ಕಾರ್ಖಾನೆಗಳಲ್ಲಿ ನೇರವಾಗಿ ಕಾರ್ಯನಿರ್ವಹಿಸುವ ಅಂದಾಜು 5 ಲಕ್ಷ ಕಾರ್ವಿುಕರ ಜೀವನೋಪಾಯದ ಮೇಲೆ ಪರಿಣಾಮ ಬೀರಲಿದೆ. ಆದರೆ, ರಾಜ್ಯ ಸರ್ಕಾರದ ಸಕ್ಕರೆ ಇಲಾಖೆ ಕಬ್ಬು ಅಭಿವೃದ್ಧಿ ಆಯುಕ್ತರು ಸಕ್ಕರೆ ಕಾರ್ಖಾನೆಗಳ ರಿಕವರಿ ಆಧಾರದ ಮೇಲೆ ಎಫ್ಆರ್ಪಿ ನಿಗದಿ ಮಾಡುವುದು ಇನ್ನೂ ನೆನೆಗುದಿಗೆ ಬಿದ್ದಿದೆ.
ಬಾಕಿ ಬಿಲ್ ಪಾವತಿ: ಕಳೆದ ವರ್ಷ ಕಬ್ಬು ನುರಿಸುವ ಹಂಗಾಮಿನಲ್ಲಿ (2022-23) ಕಬ್ಬು ನುರಿಸಿದ್ದ ರಾಜ್ಯದ 74 ಸಕ್ಕರೆ ಕಾರ್ಖಾನೆಗಳು ಆ.15ರವರೆಗೆ 20,080.65 ಸಾವಿರ ಕೋಟಿ ರೂ. ಬಿಲ್ ಪಾವತಿಸಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಕಳೆದ ಕಬ್ಬು ನುರಿಸುವ ಹಂಗಾಮಿನಲ್ಲಿ 6.03 ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಿ, 59 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿದ್ದವು. ಎಲ್ಲ ಕಾರ್ಖಾನೆಗಳು ಸೇರಿ ರಾಜ್ಯದ ಸಕ್ಕರೆ ಸರಾಸರಿ ಇಳುವರಿ 9.91 ಇದೆ. ಸಕ್ಕರೆ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ ಬಹುತೇಕ ಸಕ್ಕರೆ ಕಾರ್ಖಾನೆಗಳು ಎಫ್ಆರ್ಪಿ ಪಾವತಿ ಮಾಡಿವೆ. ಆದರೆ ವಿಜಯಪುರ ಜಿಲ್ಲೆಯ ಕಾರಜೋಳ ಗ್ರಾಮದಲ್ಲಿ ಶ್ರೀ ಬಸವೇಶ್ವರ ಶುಗರ್ಸ್ ಲಿ. ಸಕ್ಕರೆ ಕಾರ್ಖಾನೆ ಇನ್ನೂ 7.60 ಕೋಟಿ ರೂ. ಮೊತ್ತದ ಬಿಲ್ ಪಾವತಿ ಮಾಡಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಸರ್ಕಾರ ಸಕ್ಕರೆ ಇಲಾಖೆಯ ಉನ್ನತ ಅಧಿಕಾರಿಗಳು ಶೀಘ್ರದಲ್ಲಿಯೇ ಎಫ್ಆರ್ಪಿ ನಿಗದಿ ಪಡಿಸುವುದಕ್ಕಾಗಿ ಸಭೆ ಕರೆಯುವ ಸಾಧ್ಯತೆಯಿದೆ. ಆಗ ರಾಜ್ಯದ ಸಕ್ಕರೆ ಕಾರ್ಖಾನೆಗಳು ಕಳೆದ ಹಂಗಾಮಿನಲ್ಲಿ ಕಬ್ಬು ನುರಿಸಿದ ಇಳುವರಿ ಆಧಾರದ ಮೇಲೆ ಎಫ್ಆರ್ಪಿ ನಿಗದಿಪಡಿಸಲಾಗುತ್ತದೆ. | ಡಾ.ಆರ್.ಬಿ.ಖಾಂಡಗಾವೆ, ನಿರ್ದೇಶಕ, ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಬೆಳಗಾವಿ
ಕಾರ್ಖಾನೆಗಳಿಗೆ ಆರ್ಥಿಕ ನೆರವು: ಬ್ಯಾಂಕ್ ಸಾಲದ ಮೂಲಕ ಸಕ್ಕರೆ ಕಾರ್ಖಾನೆಗಳಲ್ಲಿ ಎಥೆನಾಲ್ ಘಟಕ ಅಳವಡಿಸಿಕೊಳ್ಳವವರಿಗೆ ಶೇ.6 ಬಡ್ಡಿಯನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಜತೆಗೆ ಬಯೋಗ್ಯಾಸ್ನಿಂದ ವಿದ್ಯುತ್ ಉತ್ಪಾದನೆ ಸೇರಿ ಕಬ್ಬಿನ ಉಳಿದ ಉಪ ಉತ್ಪನ್ನಗಳಿಂದ ಕಾರ್ಖಾನೆಗಳಿಗೆ ಮೊದಲಿಗಿಂತಲೂ ಆರ್ಥಿಕ ಆದಾಯ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.