ಅನುಮಾನದಿಂದ ಕಾರಿನ ಡಿಕ್ಕಿ ಓಪನ್​ ಮಾಡಿದವರಿಗೆ ಕಾದಿತ್ತು ಭಾರೀ ಅಚ್ಚರಿ! ಕ್ರೂರಿಗಳಿಗೆ ಹಿಡಿಶಾಪ ಹಾಕಿದ ಸ್ಥಳೀಯರು

WhatsApp Image 2024-04-25 at 10.29.09 AM
Published on

ನವದೆಹಲಿ: ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, ನಾಲ್ಕು ಅಥವಾ ಐದು ಜನರು ಕುಳಿತು ಪ್ರಯಾಣಿಸಬಹುದಾದ ಕಾರಿನಲ್ಲಿ ಲೋಡ್ ಮಟ್ಟವನ್ನು ಮೀರಿ ಚಲಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು, ತಕ್ಷಣವೇ ಕಾರನ್ನು ತಡೆದು ಡಿಕ್ಕಿ ಓಪನ್ ಮಾಡಿದಾಗ ಕಂಡುಬಂದ ದೃಶ್ಯ ನೋಡಿ ಬೆಚ್ಚಿಬಿದ್ದ ಭಯಾನಕ ಘಟನೆ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ವರದಿಯಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನೊಳಗೆ ಬರೋಬ್ಬರಿ 30ಕ್ಕೂ ಹೆಚ್ಚು ಮೇಕೆಗಳು ಮತ್ತು ಕುರಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದವರನ್ನು ಸೆರೆಹಿಡಿದ ಸ್ಥಳೀಯರು ಚಾಲಕನನ್ನು ಹಿಗ್ಗಾಮುಗ್ಗಾ ಜಾಡಿಸಿದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಇಂಥ ಕ್ರೂರಿಗಳಿಗೆ ಎಂತಹ ಕಠಿಣ ಶಿಕ್ಷೆ ಕೊಟ್ಟರು ಸಾಲದು, ಇವರನ್ನು ಬಿಡಬೇಡಿ ಎಂದು ಕಮೆಂಟ್ ಮೂಲಕ ಮನವಿ ಮಾಡಿದ್ದಾರೆ.

ಬಲವಂತವಾಗಿ ಕಾರಿನೊಳಗೆ 30ಕ್ಕೂ ಹೆಚ್ಚು ಮೇಕೆ ಮತ್ತು ಕುರಿಗಳನ್ನು ತುಂಬಿ ಬಚ್ಚಿಟ್ಟಿರುವ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ಲಭಿಸಿದೆ ಎಂದು ವರದಿಗಳು ಹೇಳಿವೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೇಕೆ, ಕುರಿಗಳನ್ನು ಕಾರಿನಿಂದ ರಕ್ಷಿಸಿದ್ದು, ಕಾರಿನೊಳಗೆ ಪ್ರಾಣಿಗಳನ್ನು ಹೇಗೆ ತುಂಬಿಸಲಾಯಿತು? ಎಂಬ ಭಯಾನಕ ಸಂಗತಿಯನ್ನು ತನಿಖೆ ಮಾಡುತ್ತಿದ್ದಾರೆ.

ಸದ್ಯ ಪೊಲೀಸರು ಮೇಕೆಗಳು ಮತ್ತು ಕಾರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಪ್ರಾಣಿಗಳನ್ನು ಕಾರಿನೊಂದಿಗೆ ಡಿಎಸ್‌ಪಿಸಿಎ, ಟಿಸ್ ಹಜಾರಿಯಲ್ಲಿ ಠೇವಣಿ ಮಾಡಿದ್ದು, ಹೆಚ್ಚಿನ ಮಾಹಿತಿಗಾಗಿ ಈ ವಿಷಯದ ಕುರಿತು ಮುಂದಿನ ಅಗತ್ಯ ಕ್ರಮ ಜರುಗಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net