ವಿಶ್ವದ ಅತಿವೇಗದ ಓಟಗಾರ ಉಸೇನ್​ ಬೋಲ್ಟ್​ ಟಿ20 ವಿಶ್ವಕಪ್​ಗೆ ಪ್ರಚಾರ ರಾಯಭಾರಿ

web bolt
Published on

ದುಬೈ: ವೆಸ್ಟ್​ ಇಂಡೀಸ್​ ಮತ್ತು ಅಮೆರಿಕದ ಆತಿಥ್ಯದಲ್ಲಿ ಜೂನ್​ 1ರಿಂದ 29ರವರೆಗೆ ನಡೆಯಲಿರುವ ಟಿ20 ವಿಶ್ವಕಪ್​ ಟೂರ್ನಿಗೆ ಅಥ್ಲೆಟಿಕ್ಸ್​ ದಿಗ್ಗಜ ಉಸೇನ್​ ಬೋಲ್ಟ್​ ಅವರನ್ನು ಪ್ರಚಾರ ರಾಯಭಾರಿಯಾಗಿ ಐಸಿಸಿ ಬುಧವಾರ ನೇಮಿಸಿದೆ.

ಕೆರಿಬಿಯನ್​ ದ್ವೀಪರಾಷ್ಟ್ರವಾದ ಜಮೈಕಾದ ಉಸೇನ್​ ಬೋಲ್ಟ್​ 2008ರ ಬೀಜಿಂಗ್​ ಒಲಿಂಪಿಕ್ಸ್​ನಲ್ಲಿ 100, 200 ಮತ್ತು 4/100 ಮೀ. ರಿಲೇ ಸ್ಪರ್ಧೆಯಲ್ಲಿ ವಿಶ್ವದಾಖಲೆ ನಿರ್ಮಿಸುವ ಮೂಲಕ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದರು. ಒಟ್ಟಾರೆ 8 ಒಲಿಂಪಿಕ್ಸ್​ ಸ್ವರ್ಣ ಪದಕಗಳ ಒಡೆಯರಾಗಿರುವ ಉಸೇನ್​ ಬೋಲ್ಟ್​ ಕ್ರಿಕೆಟ್​ ಪ್ರಿಯರೂ ಆಗಿದ್ದಾರೆ.

"ಟಿ20 ವಿಶ್ವಕಪ್​ ರಾಯಭಾರಿ ಆಗಿರುವುದು ರೋಮಾಂಚನ ತಂದಿದೆ. ಕ್ರಿಕೆಟ್​ ಆಟ ಜನಜೀವನದ ಭಾಗವಾಗಿರುವ ಕೆರಿಬಿಯನ್​ಗೆ ಸೇರಿದ ನನ್ನ ಹೃದಯದಲ್ಲೂ ಈ ಆಟ ವಿಶೇಷ ಸ್ಥಾನವನ್ನು ಹೊಂದಿದೆ' ಎಂದು 37 ವರ್ಷದ ಬೋಲ್ಟ್​ ಹೇಳಿದ್ದಾರೆ. ವಿಶ್ವದ ಅತಿದೊಡ್ಡ ಕ್ರೀಡಾ ಮಾರುಕಟ್ಟೆ ಹೊಂದಿರುವ ಅಮೆರಿಕದಲ್ಲಿ ಕ್ರಿಕೆಟ್​ ಜನಪ್ರಿಯತೆ ಹೆಚ್ಚಿಸುವ ನಿಟ್ಟಿನಲ್ಲೂ ಬೋಲ್ಟ್​ ಅವರ ಈ ಆಯ್ಕೆ ಐಸಿಸಿಗೆ ನೆರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net