

ಚಂಡೀಗಢ: ಹರಿಯಾಣದ ಕರ್ನಲ್ ಜಿಲ್ಲೆಯ ಮರ್ದನ್ಹೇರಿ ಗ್ರಾಮದ ಅಸ್ಸಾಂಧ್-ಕೈಥಲ್ ರಸ್ತೆಯಲ್ಲಿ ಪೊಲೀಸ್ ವಾಹನ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ನೇಹಿತರು ದುರಂತ ಸಾವಿಗೀಡಾಗಿದ್ದಾರೆ. ಶುಕ್ರವಾರ ರಾತ್ರು ಘಟನೆ ನಡೆದಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿಯು ಸಹ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತರನ್ನು ಜಿಂದ್ ಜಿಲ್ಲೆಯ ಸಫಿದಾನ್ ಪಟ್ಟಣದ ಪ್ರಯಾಗ್ (20) ಮತ್ತು ಕಾರ್ತಿಕ್ (26) ಹಾಗೂ ಕೈಥಲ್ನ ಡಿಯೋರಾ ಗ್ರಾಮದ ಸವಿಂದರ್ ಸಿಂಗ್ (32) ಎಂದು ಗುರುತಿಸಲಾಗಿದೆ. ಗಾಯಾಳು ಪೇದೆಗಳಾದ ವೇದ್ ಪ್ರಕಾಶ್ ಮತ್ತು ಸಮಿತ್ ಕುಮಾರ್ಗೆ ಚಿಕಿತ್ಸೆ ಮುಂದುವರಿದಿದೆ.
ಮೂಲಗಳ ಪ್ರಕಾರ ಡಿಸೆಂಬರ್ 25ರಂದು ಸವಿಂದರ್ ಸಿಂಗ್ಗೆ ಮದುವೆ ನಿಶ್ಚಯವಾಗಿತ್ತು. ಮೂವರು ಸ್ನೇಹಿತರು ಮದುವೆ ಶಾಪಿಂಗ್ ಮುಗಿಸಿ ಮನೆಗೆ ಮರಳುವಾಗ ದುರ್ಘಟನೆ ಸಂಭವಿಸಿದೆ. ಕಾರಿಗೆ ಎದುರಾದ ಪೊಲೀಸ್ ವಾಹನವು ಇತ್ತೀಚೆಗೆ ಕೈಥಾಲ್ನಿಂದ ಪಾಣಿಪತ್ಗೆ ವರ್ಗಾವಣೆಯಾದ ಪೊಲೀಸ್ ವರಿಷ್ಠಾಧಿಕಾರಿ ಶಶಾಂಕ್ ಕುಮಾರ್ರನ್ನು ಬರಮಾಡಿಕೊಳ್ಳಲು ತೆರಳುತ್ತಿತ್ತು.
ಟ್ರ್ಯಾಕ್ಟರ್ ಟ್ರೈಲರ್ ಇದ್ದಕ್ಕಿದ್ದಂತೆ ಎದುರಾಗಿದ್ದರಿಂದ ಅದನ್ನು ತಪ್ಪಿಸಲು ಜೋರಾಗಿ ಬ್ರೇಕ್ ಹಾಕಿದರೂ ಪೊಲೀಸ್ ವಾಹನ ಕೊನೆಗೆ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)