

ತುಮಕೂರು: ಶಾಲೆಗೆ ಹೋಗುತ್ತಿದ್ದ ಮಕ್ಕಳನ್ನು ಕಳ್ಳರು ಅಪಹರಿಸಲು ಪ್ರಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೊಲ್ಲರಹಟ್ಟಿ ಬಳಿ ನಡೆದಿದೆ.
ಶನಿವಾರ ಎಂದಿನಂತೆ ರಶ್ಮಿಕಾ, ಲೋಹಿತ್ ಮತ್ತು ಹರ್ಷಿತಾ ಶಾಲೆಯಿಂದ ಮನೆಗೆ ವಾಪಸಾಗುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ಕಪ್ಪು ಬಣ್ಣದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಡೆದುಕೊಂಡು ಹೋಗುತ್ತಿದ್ದ ಮೂವರು ಮಕ್ಕಳನ್ನು ಹಿಡಿದು ಕಾರಿಗೆ ಹತ್ತಿಸಲು ಯತ್ನಿಸಿದ್ದಾರೆ. ಈ ವೇಳೆ ಮಕ್ಕಳು ಅಪರಿಚತರನ್ನು ತಳ್ಳಾಡಿ, ಜೋರಾಗಿ ಕಿರುಚಿಕೊಂಡಿದ್ದಾರೆ. ಮಕ್ಕಳ ಕೂಗಾಟ ಕೇಳುತ್ತಿದ್ದಂತೆಯೇ ಭಯಗೊಂಡ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ತಳ್ಳಾಟದಲ್ಲಿ ಮಕ್ಕಳ ಕೈ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಕ್ಕಳ ಕೂಗಾಟ ಕೇಳಿ, ಸ್ಥಳಕ್ಕೆ ಬಂದ ಗ್ರಾಮಸ್ಥರಿಗೆ ಅಪಹರಣ ಪ್ರಯತ್ನದ ವಿಷಯ ಗೊತ್ತಾಗಿದೆ. ಇದಲ್ಲದೇ ಅದೇ ಅಪರಿಚಿತ ವಾಹನದಲ್ಲಿ ಈಗಾಗಲೇ ಇತರೇ ಮೂವರು ಮಕ್ಕಳನ್ನು ಹಿಡಿದು ಕೈ ಕಾಲು ಕಟ್ಟಿ, ಬಾಯಿ ಮುಚ್ಚಿಸಿ ಕಾರಿನಲ್ಲಿರಿಸಿಕೊಂಡಿದ್ದಾರೆ ಎಂದು ಕಳ್ಳರಿಂದ ಪಾರಾದ ಮಕ್ಕಳು ಆರೋಪಿಸಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ಗ್ರಾಮಸ್ಥರಿಗೆ ಇದೀಗ ಮಕ್ಕಳ ಕಳ್ಳರ ಆತಂಕ ಕಾಡುತ್ತಿದೆ. ಈ ಕುರಿತು ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಹರಣಕಾರರಿಗಾಗಿ ಶೋಧಕಾರ್ಯ ನಡೆಯುತ್ತಿದೆ.