

ತುಮಕೂರು: 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮ್ಯಾಟೊ ಬೆಳೆಯನ್ನು ರಾತ್ರೋರಾತ್ರಿ ಯಾರೋ ಕಿಡಿಗೇಡಿಗಳು ನಾಶ ಮಾಡಿದ್ದು, ರೈತ ದಂಪತಿ ಕಣ್ಣೀರು ಹಾಕುತ್ತಿದ್ದಾರೆ.
ಇಂತಹ ಅಮಾನವೀಯ ಘಟನೆ ಶಿರಾ ತಾಲೂಕಿನ ಕೊಟ್ಟಿ ಗ್ರಾಮದಲ್ಲಿ ನಡೆದಿದೆ. ರೈತ ಶಿವಣ್ಣ ಎಂಬುವರು 2 ಎಕರೆ ಜಮೀನಿನಲ್ಲಿ ಸಾಲ ಮಾಡಿ ಸುಮಾರು 12,000 ಟೊಮ್ಯಾಟೊ ಸಸಿಗಳನ್ನು ನೆಟ್ಟಿದ್ದರು. ಗಿಡಗಳು ಚೆನ್ನಾಗಿ ಬೆಳೆದಿದ್ದವು, ಇನ್ನೊಂದು ತಿಂಗಳಲ್ಲಿ ಫಸಲು ಬರಬೇಕಿತ್ತು. ಗಿಡಗಳೂ ಚೆನ್ನಾಗಿವೆ, ಉತ್ತಮ ಫಸಲು ಬರುತ್ತೆ, ಸಾಲ ತೀರಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಶಿವಣ್ಣ ಇದ್ದರು. ಆದರೆ, ಶುಕ್ರವಾರ ರಾತ್ರಿ ಕಿಡಿಗೇಡಿಗಳು ಜಮೀನಿಗೆ ನುಗ್ಗಿ 7000ಕ್ಕೂ ಹೆಚ್ಚು ಟೊಮ್ಯಾಟೊ ಸಸಿಗಳನ್ನು ನಾಶ ಮಾಡಿದ್ದಾರೆ. ಶನಿವಾರ ಬೆಳಗ್ಗೆ ಜಮೀನಿನ ಬಳಿ ಬಂದ ಶಿವಣ್ಣ ದಂಪತಿಗೆ ಇದನ್ನು ನೋಡಿ ಆಘಾತವಾಗಿದೆ. ಸಹೋದರರೇ ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಜಮೀನು ವಿಚಾರಕ್ಕೆ ರೈತ ಶಿವಣ್ಣ ಮತ್ತು ಸಹೋದರರಾದ ಮಹೇಶ ಹಾಗೂ ಸಿದ್ದಣ್ಣ ನಡುವೆ ಶುಕ್ರವಾರ ಗಲಾಟೆ ನಡೆದಿತ್ತು. ಇದೇ ದ್ವೇಷದ ಹಿನ್ನೆಲೆ ತನ್ನ ಸಹೋದರರೇ ಟೊಮ್ಯಾಟೊ ಗಿಡಗಳನ್ನು ಬುಡ ಸಮೇತ ಕಿತ್ತು ಹಾಕಿ ನಾಶ ಮಾಡಿದ್ದಾರೆ ಎಂದು ಶಿವಣ್ಣ ಆರೋಪಿಸಿದ್ದು, ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.