ಇನ್ಸ್​ಪೆಕ್ಟರ್​ ನಂದೀಶ್ ಸಾವು ಪ್ರಕರಣ: ಪೊಲೀಸ್​ ಕಮಿಷನರ್ ವಿರುದ್ಧವೇ ದೂರು ದಾಖಲು

Prathap reddy
Published on

ಬೆಂಗಳೂರು: ಹೃದಯಾಘಾತದಿಂದ ಇನ್ಸ್‌ಪೆಕ್ಟರ್ ನಂದೀಶ್​ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್​ ಕಮಿಷನರ್ ಪ್ರತಾಪ್​ ರೆಡ್ಡಿ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.

ಬೆಂಗಳೂರು ನಿವಾಸಿ ಜಾನ್ ಪಾಲ್ ಎಂಬುವವರು ದೂರು ದಾಖಲಿಸಿದ್ದಾರೆ. ಇನ್ಸ್‌ಪೆಕ್ಟರ್ ನಂದೀಶ್ ಸಾವಿಗೆ ಪ್ರತಾಪ್ ರೆಡ್ಡಿ ಅವರು ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ಆರೋಪಿಸಿರುವ ಜಾನ್​ ಪಾಲ್​, ರಾಜಕೀಯ ಒತ್ತಡ ಮತ್ತು ದ್ವೇಷವೇ ಇನ್ಸ್‌ಪೆಕ್ಟರ್ ಅಮಾನತಿಗೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಸಿದ್ದಾರೆ.

ರಾಜಕಾರಣಿಯೊಬ್ಬರನ್ನು ಖುಷಿಪಡಿಸಲು ನಂದೀಶ್​ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಇದರಿಂದ ಖಿನ್ನತೆಗೆ ಒಳಗಾಗಿದ್ದ ನಂದೀಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ 100ಕ್ಕೂ ಅಧಿಕ ಪಬ್‌ಗಳಿವೆ. ಇಂತಹ ಪಬ್‌ಗಳು ಅವಧಿಯನ್ನು ಮೀರಿ ಕಾರ್ಯನಿರ್ವಹಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸ್ ಕಮಿಷನರ್ ಅವರು ಅಧಿಕಾರ ದುರುಪಯೋಗಪಡಿಸಿ ನಂದೀಶ್​ ಅವರನ್ನು ಅಮಾನತು ಮಾಡಿದ್ದಾರೆ. ಹೀಗಾಗಿ ಸಮಗ್ರ ತನಿಖೆ ನಡೆಸುವಂತೆ ಡಿಜಿಪಿಗೆ ನಿರ್ದೇಶನ ನೀಡಬೇಕು. ಪೊಲೀಸ್ ಕಮಿಷನರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ಅಂದಹಾಗೆ ಹುಣಸೂರು ಮೂಲದ ನಂದೀಶ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು. ಕೆ.ಆರ್.ಪುರಂ ಪೊಲೀಸ್​ ಠಾಣೆಯಲ್ಲಿ ಇನ್​ಸ್ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಪಬ್​ವೊಂದಕ್ಕೆ ಅವಧಿ ಮೀರಿ ನಡೆಸಲು ಸಹಕಾರ ನೀಡುತ್ತಿದ್ದರೆಂಬ ಆರೋಪದ ಮೇಲೆ ಕೆಲಸದಿಂದ ಇತ್ತೀಚಿಗೆ ನಂದೀಶ್​ ಅವರನ್ನು ಅಮಾನತು ಮಾಡಲಾಗಿತ್ತು.

ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಕೆ.ಆರ್.ಪುರಂನ ಲಕ್ಷ್ಮೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಗುರುವಾರ (ಅ.27) ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net