

ವಿಜಯಪುರ: ತಾಯಿಯ ಜತೆಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಬರ್ಬರವಾಗಿ ಮಕ್ಕಳು ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣದಲ್ಲಿ ಶನಿವಾರ ನಡೆದಿದೆ. ತುಕಾರಾಮ ಚವ್ಹಾಣ (60) ಕೊಲೆಯಾದ ವ್ಯಕ್ತಿ.
45 ವರ್ಷದ ತಂಗೆವ್ವ ಹಾಗೂ 60 ವರ್ಷದ ತುಕಾರಾಮ ಮಧ್ಯೆ ಹತ್ತು ವರ್ಷಗಳಿಂದ ಅನೈತಿಕ ಸಂಬಂಧ ಇತ್ತು. ನಿನ್ನೆ ತಂಗೆವ್ವ ಜತೆ ಮನೆ ಹಿಂದೆ ಮಲಗಿಕೊಂಡಿದ್ದಾಗ ಸಿಕ್ಕಿಬಿದ್ದಿದ್ದ ತುಕಾರಾಮನ್ನು ಮೂವರು ಮಕ್ಕಳು ಸೇರಿ ಆಯುಧದಿಂದ ಬರ್ಬರವಾಗಿ ಹತ್ಯೆ ಮಾಡಿದ್ದರು. ನಂತರ ತಂಗೆವ್ವನ ಜತೆ ಮಕ್ಕಳಾದ ಸದಾಶಿವ ಬಂಗಾರತಳಿ, ಚಿಕ್ಕು ಬಂಗಾರತಳಿ, ಸಿದ್ದು ಬಂಗಾರತಳಿ ಪರಾರಿಯಾಗಿದ್ದರು.
ಪಿಎಸ್ಐ ಸಂಜಯ್ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಬಳಿ ಸದಾಶಿವ ಬಂಗಾರತಳಿ, ಚಿಕ್ಕು ಬಂಗಾರತಳಿ, ಸಿದ್ದು ಬಂಗಾರತಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ತಲೆಮರೆಸಿಕೊಂಡಿರುವ ತಂಗೆವ್ವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.