10 ವರ್ಷದಲ್ಲಿ 3 ಏರ್​ಪೋರ್ಟ್; 2030ಕ್ಕೆ ಒಂಬತ್ತು ಕೋಟಿ ಪ್ರಯಾಣಿಕರ ಹೊಂದಲಿದೆ ಬೆಂಗಳೂರು!

Airport
Published on

ರುದ್ರಣ್ಣ ಹರ್ತಿಕೋಟೆ ಬೆಳಗಾವಿ

ರಾಜಧಾನಿ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಾಗುವುದು ಬಹುತೇಕ ಖಚಿತವಾಗಿದ್ದು, 2033ರ ವೇಳೆಗೆ ಮೂರು ವಿಮಾನ ನಿಲ್ದಾಣಗಳು ಕಾರ್ಯಾಚರಣೆ ಮಾಡುವ ಸಾಧ್ಯತೆ ಇದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರ ಮೇಲಿನ ಹೊರೆ ತಪ್ಪಿಸುವ ಸಲುವಾಗಿಯೇ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಇದರ ಜತೆಗೆ ಎಚ್​ಎಎಲ್ ವಿಮಾನ ನಿಲ್ದಾಣದಲ್ಲೂ ಪ್ರಯಾಣಿಕರ ಸಂಚಾರ ನಡೆಸುವ ಬಗ್ಗೆ ಚರ್ಚೆ ನಡೆದಿದೆ.

ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಸಂಬಂಧಿಸಿದಂತೆ ಜನವರಿ ಮೊದಲ ವಾರದಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ತನ್ನ ಪ್ರಸ್ತಾವನೆ ಸಲ್ಲಿಸಲಿದೆ. ಈಗಾಗಲೇ ನಾಲ್ಕು ಜಾಗಗಳನ್ನು ನೋಡಿದ್ದರೂ ಬೆಂಗಳೂರಿನ ದಕ್ಷಿಣ ಭಾಗದಲ್ಲಿಯೇ ವಿಮಾನ ನಿಲ್ದಾಣ ನಿರ್ವಣವಾಗುವುದು ಬಹುತೇಕ ಖಚಿತವಾಗಿದೆ. ಆದರೆ ಯಾವ ಜಾಗವೆಂಬುದನ್ನು ಅಧಿವೇಶನ ಮುಗಿಯುತ್ತಿದ್ದಂತೆ ಅಧಿಕೃತವಾಗಿಯೇ ಘೋಷಣೆ ಮಾಡಲಾಗುತ್ತದೆ. ಎಂದು ಮೂಲಸೌಕರ್ಯ ಇಲಾಖೆಯ ಮೂಲಗಳು ಹೇಳಿವೆ. ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಡೆಕ್ಕನ್ ಏವಿಯೇಷನ್ ಸೇರಿ ಬೇರೆ ಬೇರೆ ಸಂಸ್ಥೆಗಳ ಜತೆಗೂ ಚರ್ಚೆ ನಡೆಸಲಾಗಿದೆ.

ಯಾವ ಯಾವ ಸ್ಥಳ: ಕನಕಪುರ, ಬಿಡದಿ, ದಾಬಸ್​ಪೇಟೆ-ಕುಣಿಗಲ್ ಮಧ್ಯೆ, ನೆಲಮಂಗಲ ಹಾಗೂ ಹಾರೋಹಳ್ಳಿ ಸಮೀಪ ಸ್ಥಳ ಪರಿಶೀಲನೆ ನಡೆಸಲಾಗಿದೆ. ಅಂತಿಮವಾಗಿ ಕನಕಪುರ ಅಥವಾ ಮೈಸೂರು ರಸ್ತೆಯಲ್ಲಿ ಎರಡನೇ ವಿಮಾನ ನಿಲ್ದಾಣ ಸ್ಥಾಪನೆಯಾಗಲಿದೆ ಎಂದು ಮೂಲಗಳು ಹೇಳುತ್ತಿವೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ ಎಂದೇ ವಿವರಿಸಲಾಗುತ್ತಿದೆ.

ಎಚ್​ಎಎಲ್ ಪುನಾರಂಭ: ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣವಾಗಿರುವ ಎಚ್​ಎಎಲ್ ವಿಮಾನ ನಿಲ್ದಾಣದಿಂದಲೂ ಪ್ರಯಾಣಿಕರ ಅನುಕೂಲಕ್ಕೆ ಬಳಸಲು ಚಿಂತನೆ ನಡೆದಿದೆ. ಬಿಐಎಎಲ್ ನಿರ್ವಣದ ಸಂದರ್ಭದ ಒಪ್ಪಂದ ಪ್ರಕಾರ 2033ರ ತನಕ ಅಲ್ಲಿ ಪ್ರಯಾಣಿಕರ ವಿಮಾನಗಳ ಸಂಚಾರಕ್ಕೆ ಅವಕಾಶವಿಲ್ಲ. ಆ ನಂತರ ಅಲ್ಲಿಂದ ವಿಮಾನ ಸಂಚಾರ ಮಾಡಬಹುದು. ಆದರೆ ಎಚ್​ಎಎಲ್ ವಿಮಾನ ನಿಲ್ದಾಣದ ಸಾಮರ್ಥ್ಯ 3 ರಿಂದ 5 ಮಿಲಿಯನ್ ಮಾತ್ರ. ವಿಸ್ತರಣೆಗೂ ಅಲ್ಲಿ ಅವಕಾಶವಿಲ್ಲ. ಆದ್ದರಿಂದ ಅಲ್ಲಿ ದೇಸಿಯ ವಿಮಾನಗಳ ಹಾರಾಟಕ್ಕೆ ಮಾತ್ರ ಬಳಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.

ಹೊಸೂರಿಗೆ ಪೈಪೋಟಿ: ಎರಡನೇ ವಿಮಾನ ನಿಲ್ದಾಣವನ್ನು ದಕ್ಷಿಣ ಭಾಗದಲ್ಲಿ ತಂದರೆ ರಾಜ್ಯದಲ್ಲಿ ಉದ್ದಿಮೆಗಳ ಬೆಳವಣಿಗೆಗೆ ಅನುಕೂಲವಾಗಲಿದೆ. ಜತೆಗೆ ತಮಿಳುನಾಡಿನ ಹೊಸೂರಿಗೂ ಪೈಪೋಟಿ ನೀಡಲು ಅನುಕೂಲವಾಗಲಿದೆ ಎಂದೇ ನಿರೀಕ್ಷೆ ಮಾಡಲಾಗುತ್ತಿದೆ.

ದಕ್ಷಿಣವೇ ಏಕೆ?: ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಾಜಧಾನಿಯ ದಕ್ಷಿಣ ಭಾಗದಲ್ಲಿಯೇ ಬರುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ತನ್ನದೇ ಆದ ಕಾರಣಗಳಿವೆ. ಮೊದಲನೆಯದು ಪ್ರಯಾಣಿಕರು ಯಾವ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿಮಾನ ನಿಲ್ದಾಣ ಬಳಕೆ ಮಾಡಲಿದ್ದಾರೆ ಎಂಬುದನ್ನು ಪ್ರಮುಖವಾಗಿ ನೋಡಲಾಗುತ್ತದೆ. ಅದನ್ನು ಗಮನಿಸಿದಾಗ ಎಲೆಕ್ಟ್ರಾನಿಕ್ ಸಿಟಿ ಸೇರಿ ದಕ್ಷಿಣ ಭಾಗದಲ್ಲಿಯೇ ಐಟಿ,ಬಿಟಿ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿರುವುದು ಗಮನಾರ್ಹ. ಇದರ ಜತೆಗೆ ಅನೇಕ ಅಂಶಗಳ ಚರ್ಚೆಗಳು ನಡೆದಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ 2 ಅಧಿಕೃತ, 4 ಅನಧಿಕೃತ ಸಭೆಗಳನ್ನು ನಡೆಸಿದ್ದಾರೆ.

ಬಿಐಎಎಲ್ ಸಾಮರ್ಥ್ಯ

  • ದೇಶದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣ
  • 2023-24 ರಲ್ಲಿ ಒಟ್ಟು ಪ್ರಯಾಣಿಕರು 37.5 ಮಿಲಿಯನ್
  • ದೇಸಿಯ ಪ್ರಯಾಣಿಕರ ಸಂಖ್ಯೆ 32.86 ಮಿಲಿಯನ್
  • ಅಂತಾರಾಷ್ಟ್ರೀಯ ಪ್ರಯಾಣಿಕರು 4.67
  • 439495 ಟನ್ ಕಾಗೋ
  • ಕೆಐಎಎಲ್​ಗೆ ಹೆಚ್ಚಿರುವ ಪ್ರಯಾಣಿಕರ ಒತ್ತಡ
  • ಬೆಂಗಳೂರು ದಕ್ಷಿಣ ಭಾಗದಲ್ಲಿಯೇ ಬರಲಿದೆ ಎರಡನೇ ವಿಮಾನ ನಿಲ್ದಾಣ
  • ಜನವರಿ ಮೊದಲ ವಾರದಲ್ಲಿ ಕೇಂದ್ರಕ್ಕೆ ಸಲ್ಲಿಕೆಯಾಗಲಿದೆ ಪ್ರಸ್ತಾವನೆ
  • ಎಚ್​ಎಎಲ್ ವಿಮಾನ ನಿಲ್ದಾಣದ ಮೂಲಕ ಸ್ಥಳೀಯ ವಿಮಾನಗಳ ಸಂಚಾರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net