

ಚಿಕ್ಕಮಗಳೂರು: ರಾಜ್ಯ ಮಾತ್ರವಲ್ಲದೆ ದೇಶದ ಹಲವೆಡೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ದಿನವೂ ಒಂದಲ್ಲ ಒಂದು ಹೃದಯಾಘಾತದಿಂದಾದ ಸಾವಿನ ಪ್ರಕರಣ ಕೇಳಿ ಬರುತ್ತಿವೆ. ಚಿಕ್ಕ ವಯಸ್ಸಿನವರೂ ಹೃದಯಾಘಾತಕ್ಕೆ ಒಳಗಾಗುತ್ತಿದ್ದು, ಇಂದು 27 ವರ್ಷದ ಯುವಕನೊಬ್ಬ ಬಲಿಯಾಗಿದ್ದಾನೆ.
ಟ್ರೆಕ್ಕಿಂಗ್ಗೆ ಎಂದು ತೆರಳಿದ್ದ ಯುವಕ, ಮಾರ್ಗಮಧ್ಯೆಯೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ. ರಕ್ಷಿತ್ ಎಂಬಾತ ಸಾವಿಗೀಡಾದ ಯುವಕ. ಮೈಸೂರು ಮೂಲದ ಏಳು ಯುವಕರ ತಂಡ ಚಿಕ್ಕಮಗಳೂರು ಜಿಲ್ಲೆಗೆ ಪಿಕ್ನಿಕ್ಗೆ ಹೊರಟಿದ್ದಾಗ ಈ ದುರಂತ ಸಂಭವಿಸಿದೆ.
ಇವರು ಕುದುರೆಮುಖದಿಂದ ನೇತ್ರಾವತಿ ಪಿಕ್ ಸ್ಪಾಟ್ಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ರಕ್ಷಿತ್ಗೆ ಹೃದಯಾಘಾತವಾಗಿದೆ. ಸಾವಿಗೀಡಾದ ಅವರ ಶವವನ್ನು ಜೀಪ್ನಲ್ಲಿ ಕಳಸಕ್ಕೆ ತರಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.