

ಇಂದು ವಿಶ್ವ ಆನೆ ದಿನ. ದೇಶದಲ್ಲಿ ಆನೆ ಸಂತತಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು ಹೆಮ್ಮೆಯ ಸಂಗತಿ, ಪ್ರಸ್ತುತ ದೇಶದಲ್ಲೇ ಕರ್ನಾಟಕದಲ್ಲಿ ಅತಿ ಹೆಚ್ಚು ಆನೆಗಳಿವೆ. ಆತಂಕಕಾರಿ ಸಂಗತಿ ಎಂದರೆ ತಮಿಳುನಾಡಿನಲ್ಲಿ ಕಳೆದ ಮೂರು ವರ್ಷಗಳಲ್ಲಿ 250 ಕ್ಕೂ ಹೆಚ್ಚು ಕಾಡಾನೆಗಳು ಅಸುನೀಗಿವೆ...!
ಇದಕ್ಕೆ ಹಲವರು ಹಲವು ರೀತಿಯ ಕಾರಣಗಳನ್ನು ಹೇಳುತ್ತಾರೆ.
ಅರಣ್ಯ ಅಧಿಕಾರಿಗಳು ಈ ಸಾವನ್ನು ನೈಸರ್ಗಿಕವೆಂದು ಹೇಳಿದರೆ, ಕೆಲವು ವನ್ಯಜೀವಿ ಕಾರ್ಯಕರ್ತರು ಹೇಳುವುದೇ ಬೇರೆ. ಕಾಡು ಪ್ರಾಣಿಗಳು ಬೆಳೆಗಳಿಗೆ ಹಾನಿಯಾಗದಂತೆ ತಡೆಯಲು ಕೆಲವು ರೈತರು ಬಳಸಿದ ವಿಷದಿಂದಾಗಿ ಹೆಚ್ಚಿನ ಸಾವು ಸಂಭವಿಸಿವೆ ಎಂಬುದು ಅವರ ಆರೋಪ.
ಇದನ್ನೂ ಓದಿ: ದೌರ್ಜನ್ಯದಿಂದ ಬೇಸತ್ತ ಹೆಂಡತಿಯಿಂದಲೇ ಕುಡುಕ ಗಂಡನ ಕೊಲೆ
ತಮಿಳುನಾಡಿನ ಪಶ್ಚಿಮ ಪ್ರದೇಶದಲ್ಲಿ ಆನೆಗಳ ಬಗ್ಗೆ ಅಧ್ಯಯನ ನಡೆಸಿದ ಕಾರ್ಯಕರ್ತರೊಬ್ಬರ ಪ್ರಕಾರ, ಕೆಲವು ರೈತರು ಖಾಸಗಿ ತೋಟಗಳ ಮೂಲಕ ಆನೆಗಳು ವಾರ್ಷಿಕ ವಲಸೆ ಹೋಗುವ ಸಮಯದಲ್ಲಿ ಬೆಳೆ ನಾಶವನ್ನು ತಡೆಗಟ್ಟಲು ಬೆಲ್ಲ ಮತ್ತು ವಿಷದಿಂದ ಕೂಡಿದ ಹಲಸಿನ ಹಣ್ಣನ್ನು ಇಡುತ್ತಾರೆ.
ಈ ವಿಷಪೂರಿತ ಹಣ್ಣುಗಳನ್ನು ಸೇವಿಸಿದ ಹಲವು ಆನೆಗಳು ಒಂದೇ ಅವಧಿಯಲ್ಲಿ ಸಾವನ್ನಪ್ಪಿವೆ ಎಂದು ಅವರು ತಿಳಿಸಿದ್ದಾರೆ. ಬೆಳೆಗಳನ್ನು ಬೆಳೆಸಲು ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡುವ ರೈತರು ಇಂತಹ ವಿಷ 'ಬಲೆಗಳನ್ನು' ಬಳಸುತ್ತಾರೆ ಎಂದು ಅವರು ಹೇಳಿದ್ದಾರೆ.
ಕೊಯಮತ್ತೂರಿನ ಅನೈಕಟ್ಟಿಯಿಂದ ಈರೋಡ್ನ ಭವಾನಿ ಸಾಗರದವರೆಗೆ ಇಂತಹ ಅಕ್ರಮ ಬೆಳೆ ತೋಟಗಳು ಕಂಡುಬಂದಿವೆ ಮತ್ತು ವೆಲ್ಲಿಯಗಡು, ಕರಮಡೈ, ಮೆಟ್ಟುಪಾಳಯಂ, ಸಿರುಮುಗೈ ಮತ್ತು ಲಿಂಗಪುರಂ ಗುಂಟ ಇವು ಇವೆ ಎಂದು ಅವರು ಹೇಳುತ್ತಾರೆ. ಆದರೆ ಅರಣ್ಯ ಅಧಿಕಾರಿಗಳು ಈ ಸಾವನ್ನು ನೈಸರ್ಗಿಕವೆಂದು ವರದಿ ಮಾಡಿದ್ದಾರೆ ಎಂದು ಕಾರ್ಯಕರ್ತ ಆರೋಪಿಸಿದ್ದಾರೆ.
ಮತ್ತೊಂದೆಡೆ, ರಾಜ್ಯದ ವನ್ಯಜೀವಿ ಪಶುವೈದ್ಯಕೀಯ ಅಧಿಕಾರಿಗಳು ಎಲ್ಲಾ ಆನೆಗಳ ಸಾವು ವಿಷದಿಂದಾದುದಲ್ಲ ಎಂದು ಹೇಳಿದ್ದಾರೆ.
"ಕೆಲವು ಸಂದರ್ಭಗಳಲ್ಲಿ ಆನೆಗಳಿಗೆ ಪೌಷ್ಟಿಕ ಆಹಾರ ಸಿಗದಿದ್ದಾಗ, ಅವರು 'ಸೀಮೈ ಕರುವೆಲಂ' ನಂತಹ ಸಸ್ಯಗಳನ್ನು ಸೇವಿಸುತ್ತವೆ. ಇದರ ಪರಿಣಾಮ ಅವು ದುರ್ಬಲಗೊಂಡು ಸಾವನ್ನಪ್ಪುತ್ತವೆ. ಕಾಲು ಮತ್ತು ಬಾಯಿ ಕಾಯಿಲೆ ಮತ್ತು ಆಂಥ್ರಾಕ್ಸ್ನಿಂದಾಗಿ ಸಹ ಕೆಲ ಆನೆಗಳು ಸಾವಿಗೀಡಾಗಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಬೆಳೆಗಳಿಗೆ ಬಳಸುವ ಕೀಟನಾಶಕಗಳಿಂದಾಗಿ ಕೂಡ ಆನೆಗಳ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಏತನ್ಮಧ್ಯೆ, ರಾಜ್ಯದಲ್ಲಿ ಆನೆಗಳ ಸಾವಿನ ತನಿಖೆಗಾಗಿ ಸಮಿತಿಯನ್ನು ರಚಿಸಲಾಗಿದೆ ಎಂದು ತಮಿಳುನಾಡು ವನ್ಯಜೀವಿ ಅಧಿಕಾರಿಯೊಬ್ಬರು ಹೇಳಿದ್ದಾರೆ.