

ನವದೆಹಲಿ: ಕೋಳಿಕ್ಕೋಡ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ದುರಂತದಲ್ಲಿ ಮೃತಪಟ್ಟ ಇಬ್ಬರು ಪೈಲಟ್ಗಳು ಸೇರಿ ಇತರ 18 ಪ್ರಯಾಣಿಕರ ಕುಟುಂಬದವರು 1.19 ಕೋಟಿ ರೂ. ಪರಿಹಾರ ಪಡೆಯಲು ಅರ್ಹರಾಗಿದ್ದಾರೆ.
ಸಾಮಾನ್ಯವಾಗಿ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಹಾಗೂ ಗಾಯಗೊಂಡವರಿಗೆ ಮಾಂಟ್ರಿಯಲ್ ಒಪ್ಪಂದದ ಪ್ರಕಾರ ಪರಿಹಾರ ನಿಗದಿ ಮಾಡಲಾಗುತ್ತದೆ ಎಂದು ಏರ್ ಇಂಡಿಯಾದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಒಪ್ಪಂದವನ್ನು ಹಿನ್ನೆಲೆಯಾಗಿಟ್ಟುಕೊಂಡು ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ವಿಮಾನ ಪ್ರಯಾಣಿಕರ ಹಕ್ಕುಗಳ ಸನ್ನದು ರೂಪಿಸಿದೆ. ಇದರಂತೆ ಪರಿಹಾರದ ಮೊತ್ತ ಎಷ್ಟಿರಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.
ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರು ನಷ್ಟ ಪರಿಹಾರವಾಗಿ 1,13,100 ವಿಶೇಷ ಪಾವತಿ ಹಕ್ಕು (ಸ್ಪೆಷಲ್ ಡ್ರಾಯಿಂಗ್ ರೈಟ್ಸ್- ಎಸ್ಡಿಆರ್) ಹೊಂದಿದ್ದಾರೆ. ಅಪಘಾತ ಸಂಭವಿಸಿದ ಶುಕ್ರವಾರಕ್ಕೆ ಅನ್ವಯಿಸುವಂತೆ ಒಂದು ಎಸ್ಡಿಆರ್ನ ಮೌಲ್ಯ 1.14 ಅಮೆರಿಕನ್ ಡಾಲರ್ ಆಗಿದೆ. ಇದನ್ನು ಭಾರತೀಯ ರೂಪಾಯಿಗಳಿಗೆ ಪರಿವರ್ತಿಸಿದಲ್ಲಿ ಈ ಮೊತ್ತ 1.19 ಕೋಟಿ ರೂ. ಆಗಲಿದೆ ಎಂದು ಲೆಕ್ಕ ಹಾಕಲಾಗಿದೆ.
2016ರಲ್ಲಿ ನಷ್ಟ ಪರಿಹಾರದ ಮೊತ್ತವನ್ನು 1ಲಕ್ಷ ಎಸ್ಡಿಆರ್ನಿಂದ 1.13 ಲಕ್ಷಕ್ಕೆ ಏರಿಸಲಾಯಿತು. ಇದಲ್ಲದೇ, ಕಾರ್ಗೋ ವಿಳಂಬ ಅಥವಾ ನಷ್ಟಕ್ಕೆ ನೀಡಲಾಗುವ ಪರಿಹಾರವನ್ನು ಹೆಚ್ಚಿಸಲಾಗಿದೆ. ದೇಶೀಯ ವಿಮಾನ ದುರಂತದಲ್ಲಿ ಸಾವು ಸಂಭವಿಸಿದಲ್ಲಿ 20 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.
ಸದ್ಯ ಏರ್ ಇಂಡಿಯಾ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಕೇರಳ ಸರ್ಕಾರ ಕೂಡ 10 ಲಕ್ಷ ರೂ. ನೀಡಿದೆ. ಇದರ ಹೊರತಾಗಿಯೂ ಹೆಚ್ಚಿನ ಪರಿಹಾರಕ್ಕಾಗಿ ಒತ್ತಾಯಿಸುವ ಹಾಗೂ ನ್ಯಾಯಾಲಯದ ಮೊರೆ ಹೋಗುವ ಅಧಿಕಾರ ಸಂತ್ರಸ್ತರು ಹೊಂದಿರುತ್ತಾರೆ.