ಬಾಕ್ಸ್​ ಪ್ಯಾಕ್​ ಮಾಡುವಾಗಲೇ ಕುಸಿದು ಬಿದ್ದು ಯುವಕ ಸಾವು; ವೈದ್ಯರು ಹೇಳಿದ್ದಿಷ್ಟು

Heart Attack
Published on

ಆಗ್ರಾ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಯುವಕರನ್ನು ಈ ಸಮಸ್ಯೆ ಹೆಚ್ಚಾಗಿ ಭಾದಿಸುತ್ತಿದೆ ಎಂದು ಹೇಳಬಹುದಾಗಿದೆ. ಇದೀಗ ಸ್ವೀಟ್​ ಅಂಗಡಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಹೃದಯಾಘಾತದಿಂದ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಘಟನೆಯು ಆಗ್ರಾದ ಕಮಲಾ ನಗರದಲ್ಲಿನ ಸ್ವೀಟ್​ ಅಂಗಡಿ ಒಂದರಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈಗಷ್ಟೇ ಖುಷಿಯಿಂದ ಮಾತನಾಡುತ್ತಿದ್ದ ವ್ಯಕ್ತಿ ಕ್ಷಣಾರ್ಧದಲ್ಲೇ ಮೃತಪಟ್ಟಿರುವುದು ಹಲವರನ್ನು ಆತಂಕಕ್ಕೆ ದೂಡಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೋರ್ವ ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತ ಸ್ವೀಟ್​ ಬಾಕ್ಸ್​ ಪ್ಯಾಕ್​ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಕೆಳಗೆ ಕುಳಿತುಕೊಂಡು ಸ್ವೀಟ್​ ಬಾಕ್ಸ್​ ಪ್ಯಾಕ್​ ಮಾಡುತ್ತಿರುವ ವ್ಯಕ್ತಿ ಕುಳಿತಿರುವಲ್ಲೇ ಕುಸಿದು ಬಿದ್ದು ಹಿಂದಕ್ಕೆ ವಾಲಿದ್ದಾನೆ. ಕುಸಿದು ಬಿದ್ದ ವ್ಯಕ್ತಿಯನ್ನು ತಕ್ಷಣ ಉಳಿದ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಆತ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ಧಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಗ್ರಾ ಜಿಲ್ಲಾ ವೈದ್ಯಾಧಿಕಾರಿ ಮೇಲ್ನೋಟಕ್ಕೆ ಇದು ಹೃದಯಾಘಾತ ಎಂದು ಕಂಡು ಬಂದಿದ್ದು, ಸಾವಿಗೆ ನಿಖರ ಕಾರಣ ತಿಳಿಯಲು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಜಾಸ್ತಿ ಆಗುತ್ತಿದ್ದು, ಎಲ್ಲರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net