

ವಿಶಾಖಪಟ್ಟಣಂ: ಇಲ್ಲಿನ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಯಶಸ್ವಿ ಜೈಸ್ವಾಲ್ ತಮ್ಮ ಟೆಸ್ಟ್ ಬದುಕಿನ ಎರಡನೇ ಶತಕ ಸಿಡಿಸಿ ಮಿಂಚುವ ಮೂಲಕ ಹೊಸ ದಾಖಲೆ ಒಂದನ್ನು ಬರೆದಿದ್ದಾರೆ.
ಭಾರತದ ನೆಲದಲ್ಲಿ ಚೊಚ್ಚಲ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ತಾಳ್ಮೆಯ ಆಟವಾಡುವ ಮೂಲಕ ಟೀಂ ಇಂಡಿಯಾವನ್ನು ಏಕಾಂಗಿಯಾಗಿ 200ರ ಗಡಿ ದಾಟಿಸಿದ್ದಾರೆ. ಪ್ರವಾಸಿ ತಂಡಕ್ಕೆ ತಲೆನೋವಾಗಿ ಪರಿಣಮಿಸಿರುವ ಯಶಸ್ವಿ ಜೈಸ್ವಾಲ್ 16 ಬೌಂಡರಿ, 4 ಸಿಕ್ಸರ್ ಸಮೇತ 151 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ.
ಭಾರತದ ನೆಲದಲ್ಲಿ ಚೊಚ್ಚಲ ಶತಕ ಸಿಡಿಸುವ ಮೂಲಕ ಕ್ರಿಕೆಟ್ನಲ್ಲಿ ಯಶಸ್ವಿ ಜೈಸ್ವಾಲ್ 1000 ರನ್ ಪೂರೈಸಿದ್ದಾರೆ. ಇದಕ್ಕೂ ಮುನ್ನ ಭಅರತದ ಪರತ 17 ಟಿ-20, 5 ಟೆಸ್ಟ್ ಪಂದ್ಯಗಳನ್ನು ಆಡಿರುವ ಜೈಸ್ವಾಲ್ 913 ರನ್ ಗಳಿಸಿದ್ದರು. ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಶತಕ ಸಿಡಿಸುವ ಮೂಲಕ ತಮ್ಮ ಟೆಸ್ಟ್ ರನ್ಗಳನ್ನು 500ರ ಗಡಿ ದಾಟಿಸಿದ್ದಾರೆ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 1000 ರನ್ ಗಳಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಅವರ ಈ ಶತಕದ ವಿಶೇಷವೆಂದರೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ ಟೆಸ್ಟ್ ಸರಣಿಯಲ್ಲಿ ಇದು ಟೀಂ ಇಂಡಿಯಾದಿಂದ ಮೊದಲ ಶತಕವಾಗಿದೆ. ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್, ರವೀಂದ್ರ ಜಡೇಜಾ ಮತ್ತು ಯಶಸ್ವಿ ಜೈಸ್ವಾಲ್ 70ಕ್ಕೂ ಹೆಚ್ಚು ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದರು, ಆದರೆ ಯಾರೊಬ್ಬರಿಗೂ ಶತಕ ಪೂರೈಸಲು ಸಾಧ್ಯವಾಗಿರಲಿಲ್ಲ.