21 ಬೀದಿ ನಾಯಿಗಳನ್ನು ಹತ್ಯೆಗೈದ ದುಷ್ಕರ್ಮಿಗಳು! ತನಿಖೆ ಚುರುಕು

Untitled design - 2024-02-17T135343.686
Published on

ತೆಲಂಗಾಣ: 21 ಬೀದಿನಾಯಿಗಳನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಪ್ರಾಣಿ ಹಿಂಸೆ ಕಾಯ್ದೆಯಡಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಘಟನೆ ತೆಲಂಗಾಣದ ಗ್ರಾಮವೊಂದರಲ್ಲಿ ವರದಿಯಾಗಿದ್ದು, ಇದುವರೆಗೆ ಶಂಕಿತರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.

ಮಹಬೂಬನಗರ ಜಿಲ್ಲೆಯ ಪೊನ್ನಕಲ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಈ ಗ್ರಾಮವು ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 2 ಕಿಮೀ ದೂರದಲ್ಲಿದೆ. ಬಂದೂಕುಗಳೊಂದಿಗೆ ಶಸ್ತ್ರಸಜ್ಜಿತವಾದ ಅಪರಿಚಿತ ದುಷ್ಕರ್ಮಿಗಳು ಶ್ವಾನಗಳನ್ನು ಉದ್ದೇಶಪೂರ್ವಕಾಗಿ ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪಶು ಸಂಗೋಪನಾ ಇಲಾಖೆ ಮೃತ ನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ಹತ್ಯೆಯ ಭೀಕರ ಸ್ವರೂಪ ಇದೀಗ ಬಟಾಬಯಲಾಗಿದೆ.

ಅಡ್ಡಕಲ್ ಪೊಲೀಸ್ ಉಪನಿರೀಕ್ಷಕ ಶ್ರೀನಿವಾಸ್ ಮಾತನಾಡಿ, ನಾಯಿಗಳಿಗೆ ವಿಷ ಬೆರೆಸಿ, ಸ್ಥಳೀಯವಾಗಿ ತಯಾರಿಸಿದ ಆಯುಧಗಳಿಂದ ಹತ್ತಿರದಿಂದಲೇ ಹತ್ಯೆಗೈದಿರುವ ಶಂಕೆಯಿದೆ. ಗ್ರಾಮದಲ್ಲಿ ಹಾಗೂ ಹೆದ್ದಾರಿಯುದ್ದಕ್ಕೂ ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದು ತನಿಖೆಗೆ ತೊಡಕಾಗಿದೆ. ಆದರೆ ಅಧಿಕಾರಿಗಳು ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಘಟನೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಹತ್ಯೆ ನಡೆದ ಸ್ಥಳದಲ್ಲಿ ಪತ್ತೆಯಾದ ಖಾಲಿ ಕಾಟ್ರಿಡ್ಜ್‌ಗಳನ್ನು ಗುರುತಿಸುವುದು ಸೇರಿದಂತೆ ಪುರಾವೆಗಳನ್ನು ಸಂಗ್ರಹಿಸಲು ಸುಳಿವು ತಂಡವನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net