ವಿಪತ್ತುಗಳಿಂದಲೇ ತುಂಬಿರಲಿದೆ 2024; ಬಲ್ಗೇರಿಯಾದ ಬಾಬಾ ವಂಗಾ ಭವಿಷ್ಯವಾಣಿ

Baba Vanga
Published on

ನವದೆಹಲಿ: ಬಲ್ಗೇರಿಯಾದ ಪ್ರಸಿದ್ಧ ಮಹಿಳೆ ಬಾಬಾ ವಂಗಾ ಅವರ ನಿಖರವಾದ ಭವಿಷ್ಯವಾಣಿಗಳು ಜಗತ್ಪ್ರಸಿದ್ಧವಾಗಿವೆ. ಬಾಬಾ ವಂಗಾ ಅವರನ್ನು ನಾಸ್ಟ್ರಾಡಾಮಸ್ ಎಂದೂ ಕರೆಯುತ್ತಾರೆ. ಬರಾಕ್ ಒಬಾಮಾ ಅಧ್ಯಕ್ಷ ಸ್ಥಾನದಿಂದ ಪ್ರಿನ್ಸೆಸ್ ಡಯಾನಾ ಸಾವಿನವರೆಗೆ ಅವರು ನುಡಿದಿರುವ ಬಹುತೇಕ ಭವಿಷ್ಯ ವಾಣಿಗಳು ನಿಜವಾಗಿವೆ. ಈಗ ಅವರು 2024ರ ಸಾಲಿನ ಕುರಿತು ಭಯಾನಕ ಭವಿಷ್ಯ ನುಡಿದಿದ್ದು, ಈ ವರ್ಷವು ಹಲವು ವಿಪತ್ತುಗಳಿಂದ ಕೂಡಿರಲಿದೆ ಎಂದು ಹೇಳಿರುವುದು ಆತಂಕ ಮೂಡಿಸಿದೆ.

2024ರಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಹತ್ಯೆಗೆ ಪ್ರಯತ್ನ ನಡೆಯಲಿದೆ ಎಂದು ವಂಗಾ ಮುನ್ಸೂಚನೆ ನೀಡಿದ್ದಾರೆ. ಯುರೋಪ್​ನಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗುವ ಬಗ್ಗೆ ಎಚ್ಚರಿಸಿದ್ದಾರೆ. ದೊಡ್ಡ ದೇಶವೊಂದು ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಗಳು ಅಥವಾ ದಾಳಿಗಳನ್ನು ನಡೆಸಲಿದೆ ಎಂದೂ ಹೇಳಿದ್ದಾರೆ.

ಈ ವರ್ಷದಲ್ಲಿ ಸಾಕಷ್ಟು ಆರ್ಥಿಕ ಬಿಕ್ಕಟ್ಟು ತಲೆದೋರಲಿದೆ. ಸಾಲಗಳು ಹೆಚ್ಚಾಗುತ್ತವೆ. ಗಡಿ ಮತ್ತು ರಾಜಕೀಯ ವಿವಾದಗಳು ಉಲ್ಬಣಗೊಳ್ಳುತ್ತವೆ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಮತ್ತು ಭೂಕಂಪಗಳಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ತಾಪಮಾನದಲ್ಲಿ ಬದಲಾವಣೆ ಇರಲಿದ್ದು, ತಣ್ಣನೆಯ ಸ್ಥಳಗಳು ಬಿಸಿಯಾಗುತ್ತವೆ. ಕರಗುವ ಹಿಮನದಿಗಳಿಂದ ಕರಾವಳಿ ನಗರಗಳು ನೀರಿನಲ್ಲಿ ಮುಳುಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

ಯಾರೀ ಜ್ಯೋತಿಷಿ?: ಬಾಬಾ ವಂಗಾ ಅವರ ಪೂರ್ತಿ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ. ಅವರು 1911ರಲ್ಲಿ ಜನಿಸಿದ್ದಾರೆ. 12ನೇ ವಯಸ್ಸಿನಲ್ಲಿಯೇ ಬೃಹತ್ ಚಂಡಮಾರುತದ ಸಂದರ್ಭದಲ್ಲಿ ದೃಷ್ಟಿ ಕಳೆದು ಕೊಂಡರು. ಕೆಲವು ದಿನಗಳ ನಂತರ ಅವರ ಮನೆಯಲ್ಲಿಯೇ ಮೊದಲ ಭವಿಷ್ಯ ನುಡಿದರು.

ಒಂದಿಷ್ಟು ಸಿಹಿ ಸುದ್ದಿ: 2024ರಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಒಳ್ಳೆಯ ಸುದ್ದಿ ಬರಲಿದ್ದು, ಅದು ಮನುಷ್ಯರ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಅಲ್ಝಿಮರ್ಸ್, ಕ್ಯಾನ್ಸರ್ ಕಾಯಿಲೆಗೆ ವಿಜ್ಞಾನಿಗಳು ಮದ್ದು ಕಂಡುಕೊಳ್ಳಲಿದ್ದಾರೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಾಧನೆ ಕಂಡುಬರಲಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net