

ಬೆಂಗಳೂರು: ಈ ವರ್ಷದ ಪ್ರಾರಂಭದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಟಾಲಿವುಡ್ನ ಸಾಲು ಸಾಲು ಸಿನಿಮಾಗಳು ತೆರೆಕಂಡು, ಸಿನಿಪ್ರೇಕ್ಷಕರನ್ನು ಮನರಂಜಿಸಲು ಮುಂಚೂಣಿಯಲ್ಲಿತ್ತು. ಕೆಲವು ಚಿತ್ರಗಳು ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರಿತು. ಎಲ್ಲಾ ಭಾಷೆಯ ಫಿಲಂಗಳು ಸಹ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡುವಲ್ಲಿ ಸಫಲವಾಗಿದೆ. ಈ ಪೈಕಿ ಹಿಟ್ ಆಗಿದ್ದು ಮಾತ್ರ ಬೆರಳೆಣಿಕೆಯಷ್ಟು.
ಕಳೆದ ನಾಲ್ಕು ತಿಂಗಳ ಹಿಂದೆ ಯಾವೆಲ್ಲಾ ಸಿನಿಮಾಗಳು ಹಿಟ್ ಆಯಿತು ಎಂದು ನೋಡುವುದಾದರೆ, ಓಪನ್ಹೈಮರ್, ಫೈಟರ್, ಬೇಬಿ, ಸೈತಾನ್, ಗುಂಟೂರು ಕಾರಂ, ಹನು-ಮ್ಯಾನ್, ಟಿಲ್ಲು ಸ್ಕ್ವೇರ್, ಪ್ರೇಮಲು, ಮಂಜುಮ್ಮೆಲ್ ಬಾಯ್ಸ್ ಮತ್ತು ದಿ ಗೋಟ್ ಲೈಫ್ ಮುಂತಾದ ದಕ್ಷಿಣ ಭಾರತದ ಚಲನಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿವೆ. ಈ ಮೂಲಕ ವಿತರಕರಿಗೆ ಭಾರಿ ಲಾಭವನ್ನು ತಂದುಕೊಟ್ಟಿದೆ.
ಈಗ ಮುಂಬರುವ ಸಿನಿಮಾಗಳ ಮೇಲೆ ಭಾರೀ ನಿರೀಕ್ಷೆಗಳು ಹೆಚ್ಚಿದ್ದು, ಸಿನಿಪ್ರೇಕ್ಷಕರು ತಮ್ಮ ನೆಚ್ಚಿನ ಸ್ಟಾರ್ ನಟರ ಚಿತ್ರಗಳ ರಿಲೀಸ್ಗಾಗಿ ಎದುರುನೋಡುತ್ತಿದ್ದಾರೆ. ಆ ಪೈಕಿ ಸುಕುಮಾರ್ ನಿರ್ದೇಶನದ ಹಾಗೂ ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2: ದಿ ರೂಲ್, ಜೂ. ಎನ್‌ಟಿಆರ್ ಅಭಿನಯದ ದೇವರ, ಪ್ರಭಾಸ್ ನಟನೆಯ ಕಲ್ಕಿ 2898 ಎಡಿ, ಗೇಮ್ ಚೇಂಜರ್ ಮತ್ತು ರಾಮ್ ಚರಣ್ ಮತ್ತು ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿರುವ ಇಂಡಿಯನ್ 2, ತಮಿಳು ನಟ ಸೂರ್ಯ ಅಭಿನಯದ ಕಂಗುವ ಚಿತ್ರಗಳ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಈ ಸಿನಿಮಾಗಳು ಭಾರತೀಯ ಬಾಕ್ಸ್ ಆಫೀಸ್ ಲೆಕ್ಕಾಚಾರಗಳನ್ನು ಬದಲಾಯಿಸಲಿವೆ ಎಂದು ಊಹಿಸಲಾಗಿದೆ.
ಇದೇ ಜೂನ್‌ನಲ್ಲಿ ಇಂಡಿಯನ್ 2 ಪ್ರೇಕ್ಷಕರ ಎದುರು ಹಾಜರಾಗಲು ಸಿದ್ಧವಿದ್ದರೆ, ಆಗಸ್ಟ್ 15ರಂದು ಪುಷ್ಪ 2 ಬಿಡುಗಡೆಯಾಗಲಿದೆ. ದೇವರ ಅಕ್ಟೋಬರ್ 10ರಂದು ಅದ್ಧೂರಿ ರಿಲೀಸ್ಗೆ ಸಜ್ಜಾದರೆ, ಕಲ್ಕಿ 2898 AD ಮತ್ತು ಗೇಮ್ ಚೇಂಜರ್, ಕಂಗುವ ಚಿತ್ರಗಳಿಗೆ ಇನ್ನೂ ಅಧಿಕೃತ ಬಿಡುಗಡೆ ದಿನಾಂಕ ಫಿಕ್ಸ್ ಆಗುವುದು ಬಾಕಿ ಉಳಿದಿದೆ. ಸದ್ಯ ಈ ಚಿತ್ರಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ, ನಿರೀಕ್ಷೆ ವ್ಯಕ್ತವಾಗಿದ್ದು, ಟಿಕೆಟ್ ಖರೀದಿಯಲ್ಲಿ ದೊಡ್ಡ ಮಟ್ಟದ ದಾಖಲೆ ನಿರ್ಮಿಸಬಹುದು ಎಂದು ಹೇಳಲಾಗಿದೆ,(ಏಜೆನ್ಸೀಸ್).