

ಕಾನ್ಪುರ: ಆಘಾತಕರಿ ಘಟನೆಯೊಂದರಲ್ಲಿ ಯುವಕರಿಬ್ಬರು ಜನನಿಬಿಡ ರಸ್ತೆಯಲ್ಲಿ ಮಹಿಳೆಯೊಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗಿದ್ದು, ಯುವಕರ ನಡೆ ಹಾಗೂ ಸಾರ್ವಜನಿಕರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ವಿಪುಲ್ ಯಾದವ್ ಹಾಗೂ ಸಂಜಯ್ ನಿಶಾದ್ ಅಂಬ ಯುವಕರು ಜನನಿಬಿಡ ರಸ್ತೆಯೊಂದರಲ್ಲಿ ಮಹಿಳೆಯನ್ನು ಅಮಾನುಷವಾಗಿ ಥಳಿಸುತ್ತಿದ್ದು, ಆಕೆಯನ್ನು ತಮ್ಮ ಮನೆಗೆ ಎಳೆದೊಯ್ಯಲು ಮುಂದಾಗುತ್ತಾರೆ. ಸಹಾಯಕ್ಕಾಗಿ ಮಹಿಳೆ ಅಂಗಲಾಚುತ್ತಿದ್ದರು ಸಾರ್ವಜನಿಕರು ಆಕೆಯ ನೆರವಿಗೆ ಧಾವಿಸದೆ ಸುಮ್ಮನೇ ನೋಡುತ್ತ ನಿಂತಿರುವುದನ್ನ ನೋಡಬಹುದಾಗಿದೆ. ಮಹಿಳೆಯ ನರೆವಿಗೆ ಧಾವಿಸಿದವರ ಮೇಲೆ ವ್ಯಕ್ತಿಗಳಿಬ್ಬರು ಹಲ್ಲೆ ನಡೆಸಿದ್ದು, ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ.
ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಕಾನ್ಪುರ ನಗರ ಪೊಲೀಸ್ ಆಯುಕ್ತರು, ಘಟನೆ ಸಂಬಂಧ ವ್ಯಕ್ತಿಗಳಿಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಸಂತ್ರಸ್ತೆಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಾನ್ಪುರ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.