

ನವದೆಹಲಿ: ಎರಡು ದಿನದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮಹಾಮಾರಿ ಕರೊನಾ ವೈರಸ್ಗೆ ಬಲಿಯಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಪೊಲೀಸ್ ಇಲಾಖೆ ಮೃತರಿಗೆ ತೀವ್ರ ಸಂತಾಪ ಸೂಚಿಸಿದೆ.
ಸಹಾಯಕ ಸಬ್ ಇನ್ಸ್ಪೆಕ್ಟರ್ಗಳಾದ ವಿಕ್ರಮ್ ಮತ್ತು ಶೇಶ್ ಮಣಿ ಪಾಂಡೆ ಸಾವಿನಿಂದಾಗಿ ಪೊಲೀಸ್ ಇಲಾಖೆಯಲ್ಲಿ ಈವರೆಗೂ ಒಟ್ಟು ಮೂವರು ಮೃತಪಟ್ಟಂತಾಗಿದೆ. ಮೂವರಿಗೂ ಪೊಲೀಸ್ ಇಲಾಖೆಯ ಮುಖ್ಯಸ್ಥ ಎಸ್.ಎಸ್. ಶ್ರೀವಾತ್ಸವ್ ಅವರು ಟ್ವಿಟರ್ನಲ್ಲಿ ಕಂಬನಿ ಮಿಡಿದಿದ್ದಾರೆ.
ಕರೊನಾ ವಿರುದ್ಧದ ಹೋರಾಟದಲ್ಲಿ ಅಸುನೀಗಿದ ಇಬ್ಬರು ದಿಟ್ಟ ಸಿಬ್ಬಂದಿಯ ಸಾವಿಗೆ ದೆಹಲಿ ಪೊಲೀಸ್ ಕುಟುಂಬ ಸಂತಾಪ ಸೂಚಿಸುತ್ತದೆ. ಅವರನ್ನು ಉಳಿಸಲು ಸಾಕಷ್ಟು ಪ್ರಯತ್ನಿಸಿದಾದರೂ ಸಾಧ್ಯವಾಗಲಿಲ್ಲ. ಎಎಸ್ಐ ವಿಕ್ರಮ್ ಮತ್ತು ಶೇಶ್ ಮಣಿ ಪಾಂಡೆ ಅವರಿಗೆ ನಾವು ಗೌರವ ಸಲ್ಲಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲು ನಾವು ಬದ್ಧರಾಗಿದ್ದೇವೆ ಎಂದು ಶ್ರೀವಾತ್ಸವ್ ಅವರು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ದೆಹಲಿ ಪೊಲೀಸ್ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯಲ್ಲೂ ಸಂತಾಪ ಸೂಚಿಸಲಾಗಿದೆ.
ವಿಕ್ರಮ್ ಅವರು ಉಸಿರಾಟ ತೊಂದರೆಯಿಂದಾಗಿ ಮೇ 6ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ 11: 30ರ ಸುಮಾರಿಗೆ ಮೃತಪಟ್ಟಿದ್ದಾರೆ. ಶೇಶ್ ಮಣಿ ಅವರಿಗೆ ಮೇ 26ರಂದು ಕರೊನಾ ಪಾಸಿಟಿವ್ ಬಂದಿತ್ತು. ನಿನ್ನೆ (ಶನಿವಾರ) ಸಾವಿಗೀಡಾದರು.
ಇದಕ್ಕೂ ಮುನ್ನ ಅಮಿತ್ ರಾಣಾ ಹೆಸರಿನ ಕಾನ್ಸ್ಟೇಬಲ್ ಒಬ್ಬರು ಜ್ವರ ಮತ್ತು ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದರು. (ಏಜೆನ್ಸೀಸ್)