

ರಾವಲ್ಪಿಂಡಿ: ಎಕ್ಸ್‌ಪ್ರೆಸ್‌ನ ರೈಲಿನ ಬೋಗಿಗಳು ಹಳಿತಪ್ಪಿದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟು, 50ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಕಿಸ್ತಾನ ರಾವಲ್ಪಿಂಡಿ ಬಳಿ ನಡೆದಿದೆ.
ಇದನ್ನೂ ಓದಿ: ಹಾರ್ನ್ ಮಾಡಿದ್ದಕ್ಕೆ ವೈದ್ಯರಿಗೆ ಅಮಾನುಷವಾಗಿ ಥಳಿಸಿದ ಯುವಕ..!
ಭಾನುವಾರದಂದು ಹಜಾರಾ ಎಕ್ಸ್‌ಪ್ರೆಸ್ ಕರಾಚಿಯಿಂದ ರಾವಲ್ಪಿಂಡಿಗೆ ಹೊರಟಿತ್ತು. ಈ ವೇಳೆ ಶಹಜಾದ್‌ಪುರ ಮತ್ತು ನವಾಬ್‌ಶಾ ನಡುವಿನ ಸಹಾರಾ ರೈಲು ನಿಲ್ದಾಣದ ಬಳಿ 8 ಬೋಗಿಗಳು ರೈಲು ಹಳಿತಪ್ಪಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸದ್ಯ, ಸ್ಥಳದಲ್ಲಿ ಭರದ ರಕ್ಷಣಾ ಕಾರ್ಯ ಚಾಲ್ತಿಯಲ್ಲಿದ್ದು, ಬೋಗಿಗಳಿಂದ ಜನರನ್ನು ಹೊರತೆಗೆಯಲಾಗುತ್ತಿದೆ. ಅಪಘಾತದಲ್ಲಿ ಮಡಿದವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಎನ್ನಲಾಗಿದೆ.
ಸ್ಥಳೀಯ ನಾಗರಿಕರು ಸಹ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಗಾಯಗೊಂಡವರನ್ನು ನವಾಬ್‌ಶಾಹ್‌ನಲ್ಲಿರುವ ಪೀಪಲ್ಸ್ ಮೆಡಿಕಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ರೈಲು ಹಳಿ ತಪ್ಪಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ರೈಲ್ವೇ ಸಚಿವ ಖವಾಜಾ ಸಾದ್ ರಫೀಕ್, ಇದೊಂದು ಗಂಭೀರ ಅಪಘಾತವಾಗಿದ್ದು, ರಕ್ಷಣಾ ತಂಡಗಳನ್ನು ಸ್ಥಳಕ್ಕೆ ತ್ವರಿತವಾಗಿ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ. ದುರದೃಷ್ಟವಶಾತ್ ಈ ಹಿಂದೆ, ಜೂನ್ 2021 ರಲ್ಲಿ ಸಿಂಧ್‌ನ ದಹರ್ಕಿ ಬಳಿ ಎರಡು ರೈಲುಗಳು ಡಿಕ್ಕಿ ಹೊಡೆದು 65 ಜನರ ಪ್ರಾಣವನ್ನು ಕಳೆದುಕೊಂಡು, ಸುಮಾರು 150 ಜನರು ಗಾಯಗೊಂಡಿದ್ದರು.(ಏಜೆನ್ಸೀಸ್)