ಭಾನುವಾರ ರಾಜ್ಯಕ್ಕೆ ಬರಲಿದೆ 130 ಮೆಟ್ರಿಕ್ ಟನ್ ಆಮ್ಲಜನಕ; ಅದಕ್ಕೆಂದೇ ರೈಲ್ವೇ ಇಲಾಖೆಯಿಂದ ವಿಶೇಷ ಎಕ್ಸ್​​ಪ್ರೆಸ್ ರೈಲು

Oxygen Express train
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ರಾಜ್ಯದ ಕರೊನಾ ಸೋಂಕಿತರಿಗೆ ಎದುರಾಗುತ್ತಿರುವ ಆಮ್ಲಜನಕ ಕೊರತೆ ನೀಗಿಸಲು ರೈಲ್ವೆ ಇಲಾಖೆ ಎರಡನೇ ಆಮ್ಲಜನಕ ವಿಶೇಷ ಎಕ್ಸ್​ಪ್ರೆಸ್​ ರೈಲನ್ನು ರಾಜ್ಯಕ್ಕೆ ಕಳುಹಿಸುತ್ತಿದೆ.

ದಿನದಿಂದ ದಿನಕ್ಕೆ ಕರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಸೋಂಕಿತರಿಗೆ ಅಗತ್ಯವಿರುವ ಆಮ್ಲಜನಕದ ಕೊರತೆಯೂ ಉಂಟಾಗುತ್ತಿದೆ. ಹೀಗಾಗಿ ಖುದ್ದು ಹೈಕೋರ್ಟ್​ ರಾಜ್ಯಕ್ಕೆ 1,200 ಟನ್​ ಲಿಕ್ವಿಡ್​ ಮೆಡಿಕಲ್​ ಆಮ್ಲಜನಕ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಅದರಂತೆ ಕೇಂದ್ರ ಸರ್ಕಾರ ಕಳೆದ ಮಂಗಳವಾರ (ಮೇ 11) ಮೊದಲ ಆಕ್ಸಿಜನ್​ ವಿಶೇಷ ರೈಲನ್ನು ಜೆಮ್​ಶೆಡ್​ಪುರದಿಂದ ರಾಜ್ಯಕ್ಕೆ ಕಳುಹಿಸಲಾಗಿತ್ತು. ಅದರ ಮೂಲಕ 120 ಮೆಟ್ರಿಕ್​ ಟನ್​ ಲಿಕ್ವಿಡ್​ ಆಕ್ಸಿಜನ್​ ಹೊತ್ತ 6 ಟ್ಯಾಂಕರ್​ಗಳು ರಾಜ್ಯಕ್ಕೆ ಬಂದಿದ್ದವು. ಇದೀಗ ಮತ್ತೊಂದು ಆಕ್ಸಿಜನ್​ ವಿಶೇಷ ರೈಲನ್ನು ಕಳುಹಿಸಲಾಗುತ್ತಿದೆ.

130 ಮೆ.ಟನ್​ ಆಮ್ಲಜನಕ: ಮಂಗಳವಾರ ರಾಜ್ಯಕ್ಕೆ ಬಂದಿದ್ದ ಆಮ್ಲಜನಕ ವಿಶೇಷ ರೈಲನ್ನು ಇದೀಗ ಆಂಧ್ರಪ್ರದೇಶದ ಎಲೂರು ನಿಲ್ದಾಣಕ್ಕೆ ಕಳುಹಿಸಲಾಗಿದೆ. ಖಾಲಿ ಟ್ಯಾಂಕರ್​ಗಳನ್ನು ಹೊತ್ತ ರೈಲು ಗುರುವಾರ ತೆರಳಿದ್ದು, ಅಲ್ಲಿ ಆಮ್ಲಜನಕವನ್ನು ಭರ್ತಿ ಮಾಡಿಕೊಂಡು ಭಾನುವಾರದೊಳಗೆ ರಾಜ್ಯಕ್ಕೆ ವಾಪಸ್​ ಬರಲಿದೆ. ಈ ಬಾರಿ 130 ಮೆಟ್ರಿಕ್​ ಟನ್​ ಆಮ್ಲಜನಕ ರಾಜ್ಯಕ್ಕೆ ತರಲಾಗುತ್ತದೆ. ಹೀಗೆ ಆಂಧ್ರಪ್ರದೇಶದಿಂದ ಬರುವ ರೈಲು, ರೈಲ್ವೆ ಇಲಾಖೆ ನಿಗದಿ ಮಾಡುವ ನಿಲ್ದಾಣಗಳಿಗೆ ಮತ್ತೆ ವಾಪಸ್​ ತೆರಳಲಿದೆ. ಅಲ್ಲಿಂದ ಆಮ್ಲಜನಕ ಭರ್ತಿ ಮಾಡಿಕೊಂಡು ರಾಜ್ಯಕ್ಕೆ ಮತ್ತೆ ಬರಲಿದೆ.

100 ಆಮ್ಲಜನಕ ವಿಶೇಷ ರೈಲು ಸಂಚಾರ: ದೇಶಾದ್ಯಂತ ಆಮ್ಲಜನಕ ಪೂರೈಸುವ ಕೆಲಸ ಮಾಡುತ್ತಿರುವ ರೈಲ್ವೆ ಇಲಾಖೆ, ಈವರೆಗೆ 100 ಆಮ್ಲಜನಕ ವಿಶೇಷ ರೈಲು ಸೇವೆಯನ್ನು ನೀಡಿದೆ. ಅವುಗಳಿಂದ ಒಟ್ಟು 6,260 ಮೆಟ್ರಿಕ್​ ಟನ್​ ಆಮ್ಲಜನಕವನ್ನು ವಿವಿಧ ರಾಜ್ಯಗಳಿಗೆ ಪೂರೈಸಲಾಗಿದೆ. ಅದರಲ್ಲಿ ದೆಹಲಿಗೆ 2,404 ಮೆಟ್ರಿಕ್​ ಟನ್​ ಆಮ್ಲಜನಕ ನೀಡಲಾಗಿದೆ. ಉತ್ತರ ಪ್ರದೇಶಕ್ಕೆ 1,680 ಮೆ. ಟನ್​, ಹರಿಯಾಣಕ್ಕೆ 939 ಮೆ. ಟನ್​, ಮಹಾರಾಷ್ಟ್ರಕ್ಕೆ 404 ಮೆ.ಟನ್​, ಮಧ್ಯಪ್ರದೇಶಕ್ಕೆ 360 ಮೆ.ಟನ್​ ಲಿಕ್ವಿಡ್​ ಮೆಡಿಕಲ್​ ಆಮ್ಲಜನಕವನ್ನು ರೈಲಿನ ಮೂಲಕ ಸಾಗಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net