ಮುಂದಿನ ವಾರ ಮಾರುಕಟ್ಟೆಗೆ 11 ಐಪಿಒಗಳು ಲಗ್ಗೆ: ಹೊಸ ಕಂಪನಿಯ ಷೇರು ಖರೀದಿಸುವವರಿಗೆ ಸುಗ್ಗಿ

ipo
Published on

ಮುಂಬೈ: ಸೂರಜ್ ಎಸ್ಟೇಟ್, ಮೋಟಿಸನ್ಸ್ ಜ್ಯುವೆಲರ್ಸ್ ಮತ್ತು ಇತರೆ 9 ಐಪಿಒಗಳು (ಇನಿಷಿಯಲ್​ ಪಬ್ಲಿಕ್​ ಆಫರ್​) ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಹೊಸ ಕಂಪನಿಗಳ ಷೇರು ಖರೀದಿಸುವವರಿಗೆ ಸುಗ್ಗಿ ಆಗಲಿದೆ.

ಟಾಟಾ ಟೆಕ್ನಾಲಜೀಸ್​ ಸೇರಿದಂತೆ ಕಳೆದು ತಿಂಗಳು ಬಿಡುಗಡೆ ಮಾಡಲಾಗಿದ್ದ ಅನೇಕ ಐಪಿಒಗಳಿಗೆ ವ್ಯಾಪಕ ಬೇಡಿಕೆ ಸೃಷ್ಟಿಯಾಗಿತ್ತು. ಈ ಐಪಿಒಗಳಲ್ಲಿ ನೀವು ಬಿಡ್​ ಮಾಡದಿದ್ದರೆ ಅಥವಾ ಷೇರುಗಳು ನಿಮಗೆ ಹಂಚಿಕೆ ಆಗಿರದಿದ್ದರೆ ಈ ವರ್ಷಾಂತ್ಯದ ಸಂದರ್ಭವು ನಿಮಗೆ ಮತ್ತೊಂದು ಅವಕಾಶವನ್ನು ಸೃಷ್ಟಿಸುತ್ತಿದೆ.

ಏಳು ಪ್ರಮುಖ ಐಪಿಒಗಳು ಒಟ್ಟಾರೆಯಾಗಿ ಅಂದಾಜು 3,910 ಕೋಟಿ ರೂಪಾಯಿ ಸಂಗ್ರಹಿಸಲು ಉದ್ದೇಶಿಸಿವೆ, ಇತರೆ ನಾಲ್ಕು ಎಸ್‌ಎಂಇಗಳು (ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು) 135 ಕೋಟಿ ರೂಪಾಯಿ ಬಂಡವಾಳ ಸಂಗ್ರಹಿಸುವ ನಿರೀಕ್ಷೆ ಇದೆ.

ಏಳು ಪ್ರಮುಖ ಐಪಿಒಗಳಲ್ಲಿ ಮುತ್ತೂಟ್ ಮೈಕ್ರೋಫಿನ್, ಮೋಟಿಸನ್ಸ್ ಜ್ಯುವೆಲ್ಲರ್ಸ್, ಸೂರಜ್ ಎಸ್ಟೇಟ್ ಡೆವಲಪರ್ಸ್, ಹ್ಯಾಪಿ ಫೋರ್ಜಿಂಗ್ಸ್, RBZ ಜ್ಯುವೆಲರ್ಸ್, ಕ್ರೆಡೋ ಬ್ರಾಂಡ್ಸ್ ಮತ್ತು ಆಜಾದ್ ಇಂಜಿನಿಯರಿಂಗ್ ಮುಂದಿನ ವಾರ ಮಾರುಕಟ್ಟೆಗೆ ಬರಲಿವೆ.

ಎಸ್​ಎಂಇ ವಿಭಾಗದಲ್ಲಿ ಸಹಾರಾ ಮ್ಯಾರಿಟೈಮ್, ಎಲೆಕ್ಟ್ರೋ ಫೋರ್ಸ್, ಶಾಂತಿ ಸ್ಪಿಂಟೆಕ್ಸ್ ಮತ್ತು ಟ್ರೈಡೆಂಟ್ ಟೆಕ್ಲ್ಯಾಬ್‌ ಐಪಿಗಳು ಮಾರುಕಟ್ಟೆಗೆ ಲಗ್ಗೆ ಹಾಕಲಿವೆ.

ಏನಿದು ಐಪಿಒ?:

ಇನಿಷಿಯಲ್​ ಪಬ್ಲಿಕ್​ ಆಫರಿಂಗ್​​ (ಆರಂಭಿಕ ಸಾರ್ವಜನಿಕ ಕೊಡುಗೆ- ಐಪಿಒ) ಕಂಪನಿಗಳು ಸಾರ್ವಜನಿಕವಾಗಿ ಬಂಡವಾಳ ಸಂಗ್ರಹಿಸಲು ಬಳಸಬಹುದಾದ ವಿಧಾನಗಳಲ್ಲಿ ಒಂದಾಗಿದೆ. ಹೊಸದಾಗಿ ಆರಂಭವಾಗುವ ಕಂಪನಿಯೊಂದು ಸಾರ್ವಜನಿಕರಿಗೆ ಷೇರುಗಳನ್ನು ನೀಡುವ ಪ್ರಕ್ರಿಯೆ ಇದಾಗಿದೆ. ಸಾರ್ವಜನಿಕ ಹೂಡಿಕೆದಾರರಿಂದ ಷೇರು ಬಂಡವಾಳವನ್ನು ಐಪಿಒಗಳ ಮೂಲಕ ಖಾಸಗಿ ಕಂಪನಿಗಳು ಸಂಗ್ರಹಿಸುತ್ತವೆ. ನಿರೀಕ್ಷಿತ ಬೇಡಿಕೆಯ ಆಧಾರದ ಮೇಲೆ ಈ ಷೇರುಗಳಿಗೆ ಆರಂಭಿಕ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. 10 ರೂಪಾಯಿ ಮುಖಬೆಲೆಯ ಷೇರುಗಳಿಗೆ ನೂರಾರು ರೂಪಾಯಿಗಳಲ್ಲಿ ಹೆಚ್ಚಿನ ಮೊತ್ತದ ಹಣವನ್ನು ಪ್ರತಿ ಷೇರಿಗೆ ನಿಗದಿಪಡಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net