

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಭೂಮಿಯ ಹಕ್ಕನ್ನು ಖಾತರಿಪಡಿಸಲು ಅತ್ಯಗತ್ಯವಾದ 11ಇ ನಕ್ಷೆ ಪಡೆಯುವುದಕ್ಕೆ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿರುವುದು ಆಸ್ತಿ ಮಾಲೀಕರನ್ನು ಸಂಕಷ್ಟಕ್ಕೆ ದೂಡಿದೆ. 11ಇ ನಕ್ಷೆ ಕೋರಿ ಕಂದಾಯ ಇಲಾಖೆಗೆ ಸಲ್ಲಿಸಲಾಗಿರುವ ಅರ್ಜಿಗಳು ಧೂಳು ಹಿಡಿಯುತ್ತಿರುವ ಪರಿಣಾಮ ಆಸ್ತಿ ಮಾರಾಟದ ಜತೆಗೆ ವಿಭಾಗ ಪತ್ರಗಳು, ದಾನ ಕ್ರಯ, ಗುತ್ತಿಗೆ ನೀಡುವುದು ಇತ್ಯಾದಿ ಯಾವುದೇ ವ್ಯವಹಾರ ಸಾಧ್ಯವಾಗದೆ ಜನರು ಪರಿತಪಿಸುವಂತಾಗಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ ಪ್ರಕಾರ ಜಮೀನಿನ ಹಕ್ಕು ಬಂದ ಮೇಲೆ ಮ್ಯುಟೇಷನ್ ಪಡೆಯುವ ಹಂತದಲ್ಲಿ 11ಇ ನಕ್ಷೆ ಒದಗಿಸಬೇಕೆಂದು ಉಲ್ಲೇಖವಾಗಿದೆ. ಆದರೀಗ ಭೂಗಳ್ಳರ ಹಾವಳಿ ಹೆಚ್ಚಾದ ಕಾರಣ ಫೋಡಿ ಮತ್ತು 11ಇ ನಕ್ಷೆ ಕಡ್ಡಾಯ ಮಾಡಲಾಗಿದೆ. ಹಣಬಲವಿರುವವರು ಮತ್ತು ಪ್ರಭಾವಶಾಲಿಗಳು ಅಧಿಕಾರಿಗಳಿಗೆ ಲಂಚ ಕೊಟ್ಟು ಅಥವಾ ಒತ್ತಡ ತಂದು ಭೂ ನಕ್ಷೆ ಪಡೆದು ಆಸ್ತಿ ಮಾಲೀಕತ್ವ ಭದ್ರಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಾಮಾನ್ಯ ಜನರ ಆಸ್ತಿ ಒತ್ತುವರಿಯಾಗುತ್ತಿದೆ. ಬಡವರು 11ಇ ನಕ್ಷೆ ಪಡೆಯಲು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಮತ್ತು ಸರ್ವೆಯರ್ಗಳು ನಾನಾ ನೆಪವೊಡ್ಡಿ ಅರ್ಜಿಗಳನ್ನು ವಿಲೇವಾರಿ ಮಾಡದೆ ಕಸದ ಬುಟ್ಟಿಗೆ ಹಾಕುತ್ತಿದ್ದಾರೆ. 11ಇ ನಕ್ಷೆ ಕೊಡಲು ತಾಂತ್ರಿಕ ಮತ್ತು ಮೂಲ ಸಮಸ್ಯೆಗಳು ಸಾಕಷ್ಟು ಇರಬಹುದು. ಅವುಗಳನ್ನು ಬಗೆಹರಿಸುವ ಅಧಿಕಾರವೂ ಕಂದಾಯ ಇಲಾಖೆ ಅಧಿಕಾರಿಗಳ ವ್ಯಾಪ್ತಿಯಲ್ಲೇ ಇದೆ. ಆದರೆ ಲಂಚ ವಸೂಲಿ ಉದ್ದೇಶದಿಂದ ಈ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಅರ್ಜಿ ವಿಲೇವಾರಿ ಮಾಡುತ್ತಿಲ್ಲ.
ಮಂಜೂರು ಭೂಮಿಗೂ ಸಂಕಷ್ಟ: ಸರ್ಕಾರದಿಂದ ಮಂಜೂರಾಗಿರುವ ಜಮೀನುಗಳಿಗೆ ಫೋಡಿ ಮತ್ತು 11ಇ ನಕ್ಷೆ ದೊರೆಯುತ್ತಿಲ್ಲ. ಮಂಜೂರಾಗಿರುವ ಜಮೀನಿಗೆ ಪ್ರತ್ಯೇಕ ಸರ್ವೆ ನಂಬರ್ ಕೊಟ್ಟು ಉಳಿಕೆ ಜಮೀನು ಹಳೇ ಸರ್ವೆ ನಂಬರ್ನಲ್ಲೇ ಉಳಿಸಬೇಕಾಗುತ್ತದೆ. ನಕಲಿ ಹಕ್ಕುಪತ್ರಗಳ ಹಾವಳಿಯಿಂದಾಗಿ ಅಸಲಿ ಹಕ್ಕುಪತ್ರಗಳಿಗೆ ಬೆಲೆ ಇಲ್ಲದಂತಾಗಿದೆ. ಇದರಿಂದ ಆಸ್ತಿ ಇದ್ದರೂ ಅನುಭವಿಸುವ ಹಕ್ಕು ಮಾಲೀಕನಿಗೆ ಸಂಪೂರ್ಣವಾಗಿ ಲಭ್ಯವಾಗಿಲ್ಲ. ಸರ್ಕಾರದಿಂದ ಮಂಜೂರಾದ ಜಮೀನಿಗೆ ಫೋಡಿ ಮತ್ತು 11ಇ ನಕ್ಷೆ ಕೊಡಲು 2 ರಿಂದ 5 ಲಕ್ಷ ರೂ. ವರೆಗೂ ಲಂಚಕ್ಕೆ ಬೇಡಿಕೆ ಒಡ್ಡುತ್ತಿರುವ ಆರೋಪ ಕೇಳಿಬಂದಿದೆ. ಸರ್ವೆ ನಂಬರ್ನಲ್ಲಿರುವ ವಿಸ್ತೀರ್ಣಕ್ಕಿಂತ ಹೆಚ್ಚಿನ ಕ್ಷೇತ್ರ ಮಂಜೂರಾತಿ ಆದೇಶ ಇರುವ ಕಾರಣ ಪಹಣಿ ಸರಿಪಡಿಸುವ ಗೋಜಿಗೆ ಅಧಿಕಾರಿಗಳು ಹೋಗುತ್ತಿಲ್ಲ. ಈ ಎಲ್ಲ ಸಮಸ್ಯೆ ಬಗೆಹರಿಸುವ ವೇಳೆಗೆ ಜಮೀನಿನ ಮೂಲ ದಾಖಲೆಗಳು ಶಿಥಿಲವಾಗುತ್ತವೆ. ಅವುಗಳ ಪುನರ್ ನಿರ್ಮಾಣ ಮಾಡಲು ಹೆಚ್ಚಿನ ಕಾಲಾವಕಾಶ ಬೇಕಾಗುವುದು. ಅಧಿಕಾರಿಗಳು ಸಮಸ್ಯೆ ಬಗೆಹರಿಸದ ಪರಿಣಾಮ ಜಮೀನಿನ ಹಕ್ಕು ಮತ್ತು ಗಡಿ ವಿಚಾರದಲ್ಲಿ ಸಾರ್ವಜನಿಕರು ಕೋರ್ಟ್ ಮೇಟ್ಟಿಲೇರುತ್ತಿದ್ದಾರೆ.
ಮೋಜಣಿ-ಕಾವೇರಿ ಸಂಯೋಜನೆ: ಭೂಮಿಗೆ ನಕ್ಷೆ ಇನ್ನಿತರ ದಾಖಲೆ ಒದಗಿಸಲು ಮೋಜಣಿ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಮೊದಲು ಫೋಡಿ ಮತ್ತು 11ಇ ನಕ್ಷೆ ಸಿದ್ಧಪಡಿಸಿ ಭೂ ಮಾಲೀಕನಿಗೆ ಒಂದು ಪ್ರತಿ ಮತ್ತು ಕಂದಾಯ ಇಲಾಖೆಯಲ್ಲಿ ಮೂಲ ಪ್ರತಿ ಸಂಗ್ರಹಿಸುತ್ತಿದ್ದರು. ಇದೀಗ ಪ್ರತಿ ನಕ್ಷೆಗೂ ವಿಶೇಷ ಸಂಖ್ಯೆ ಕೊಟ್ಟು ಮೋಜಣಿ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಅಗತ್ಯ ಇದ್ದವರು ಪ್ರಿಂಟ್ ಪಡೆಯಬಹುದು. ಮೋಜಣಿ ಜತೆಗೆ ಉಪ ನೋಂದಣಿ ಕಚೇರಿಯ ಕಾವೇರಿ ತಂತ್ರಾಂಶ ಸಂಯೋಜನೆ ಮಾಡಿದ್ದು, ನಕ್ಷೆ ಇಲ್ಲದಿದ್ದರೆ ನೋಂದಣಿ ಪ್ರಕ್ರಿಯೆ ನಡೆಯುವುದಿಲ್ಲ. ಸಕಾಲದಲ್ಲಿ ಫೋಡಿ ಮತ್ತು 11ಇ ನಕ್ಷೆ ಭೂ ಮಾಲೀಕರಿಗೆ ಸಿಗದೆ ಕ್ರಯ, ದಾನ, ವಿಭಾಗ ಪತ್ರ ಮಾಡಲು ತೊಂದರೆಗೆ ಸಿಲುಕಿದ್ದಾರೆ.
ಏನಿದು 11ಇ ನಕ್ಷೆ ?: ಉದಾಹರಣೆಗೆ- ಸರ್ವೆ ನಂಬರ್ 1 ರಲ್ಲಿ 10 ಎಕರೆ ಭೂಮಿ ಇದ್ದು, ಅದಕ್ಕೆ ಮಾಲೀಕರು ಇಬ್ಬರಿದ್ದರೆ ತಲಾ 5 ಎಕರೆ ಭೂಮಿ ಹೊಂದಿದಂತಾಗುತ್ತದೆ. ಈ ಪೈಕಿ ಒಬ್ಬಾತ ತನ್ನ 5 ಎಕರೆ ಜಮೀನಿನಲ್ಲಿ 1 ಎಕರೆ ಕ್ರಯ, ದಾನ, ಗುತ್ತಿಗೆ ನೀಡಬೇಕಾದರೆ ಆಗ 5 ಎಕರೆ ಭೂಮಿಗೆ ಪ್ರತ್ಯೇಕ ಫೋಡಿ ಮಾಡಿ ಸರ್ವೆ ನಂಬರ್ 1/ಎ ಅಥವಾ 1/1 ಎಂಬ ಸಬ್ ನಂಬರ್ ಕೊಟ್ಟು ಅದರಲ್ಲಿ ಮತ್ತೆ 1 ಎಕರೆಗೆ ನಕ್ಷೆ ಕೊಡುವುದಕ್ಕೆ 11ಇ ನಕ್ಷೆ ಎನ್ನಲಾಗುತ್ತದೆ. ಆದರೆ, ಇತ್ತೀಚೆಗೆ 11ಇ ನಕ್ಷೆ ಮಾಡಿ ಸಬ್ ನಂಬರ್ ಕೊಡುವ ಬದಲು ಫೋಡಿ ಮಾಡಲಾಗುತ್ತಿದೆ. ಎಷ್ಟೇ ತಂತ್ರಜ್ಞಾನ ಅಳವಡಿಸಿದರೂ ಜನರಿಗೆ ಮಾತ್ರ ಈ ಸೇವೆ ದೊರೆಯುತ್ತಿಲ್ಲ.
ಅಧಿಕಾರಿಗಳು ಹೇಳೋದೇನು?: ಆಕಾರಬಂದು ಮತ್ತು ಪಹಣಿಗಳಲ್ಲಿ ವಿಸ್ತೀರ್ಣ ವ್ಯತ್ಯಾಸವಿದೆ. ಪಹಣಿಯ ಕಾಲಂ 3 ಮತ್ತು 9ರಲ್ಲಿ ಉಲ್ಲೇಖಿಸಿರುವ ವಿಸ್ತೀರ್ಣಕ್ಕೆ ಹೊಂದಾಣಿಕೆ ಆಗುವುದಿಲ್ಲ. ಪಹಣಿಯಲ್ಲಿ ವಿಸ್ತೀರ್ಣ ಕಡಿಮೆ ಇದ್ದು, ಮಾಲೀಕನ ಹೆಸರಿನ ಮುಂದೆ ಉಲ್ಲೇಖಿತ ವಿಸ್ತೀರ್ಣ ಹೆಚ್ಚಾಗಿರುತ್ತದೆ. ಈ ವ್ಯತ್ಯಾಸವನ್ನು ಪಹಣಿಯಲ್ಲಿ ತಿದ್ದುಪಡಿ ಮಾಡಬೇಕು. ಪಹಣಿ ತಿದ್ದುಪಡಿಗೆ ಈ ಹಿಂದಿನ ಕಂದಾಯ ದಾಖಲೆಗಳಾದ ಮ್ಯುಟೇಷನ್, ಪಹಣಿ, ಮಂಜೂರಾತಿ ಆದೇಶ ಇಲ್ಲ. ಮಂಜೂರಾತಿ ಮೂಲ ಪ್ರತಿ ಶಿಥಿಲಗೊಂಡಿದೆ. ಅದಕ್ಕಾಗಿ ಪಹಣಿ ತಿದ್ದುಪಡಿ ಅಸಾಧ್ಯ ಎಂದು ಕಂದಾಯ ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತಿಲ್ಲ. ಆದರೆ, ಹಣ ಕೊಟ್ಟವರಿಗೆ ಫೋಡಿ ಮತ್ತು 11ಇ ನಕ್ಷೆ ಸೌಲಭ್ಯ ದೊರೆಯುತ್ತಿದೆ. ಇಲ್ಲವಾದರೆ, ಸರ್ವೆ ಸೌಲಭ್ಯ ಸಿಗದೆ ವರ್ಷಾನುಗಟ್ಟಲೇ ಅರ್ಜಿಗಳು ಧೂಳು ಹಿಡಿಯುತ್ತಿವೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.