

ಲಖನೌ : ಉತ್ತರಪ್ರದೇಶದ ಉನ್ನಾವ್ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಖ್ಯಸ್ಥರಾದ 14 ವೈದ್ಯರಲ್ಲಿ 11 ಜನರು ಬುಧವಾರ ಸಂಜೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದ ಈ ವೈದ್ಯರು, ಜಿಲ್ಲೆಯಲ್ಲಿ ಕರೊನಾ ಉಲ್ಬಣವಾಗಿದ್ದಕ್ಕೆ ತಾವೇ ಹೊಣೆ ಎಂಬಂತೆ ಆಡಳಿತ ನಡೆಸಿಕೊಳ್ಳುತ್ತಿದೆ ಎಂದು ಬೇಸರಪಟ್ಟಿದ್ದಾರೆ ಎನ್ನಲಾಗಿದೆ.
ರಾಜ್ಯದ ರಾಜಧಾನಿ ಲಖನೌನಿಂದ 40 ಕಿಲೋಮೀಟರ್ ದೂರದಲ್ಲಿರುವ ಉನ್ನಾವ್ನ ಗ್ರಾಮೀಣ ಆಸ್ಪತ್ರೆಗಳ 11 ವೈದ್ಯರು ಜಂಟಿ ರಾಜೀನಾಮೆ ಪತ್ರ ಬರೆದು, ಬುಧವಾರ ಸಂಜೆ ಜಿಲ್ಲಾ ಮುಖ್ಯ ವೈದ್ಯಾಧಿಕಾರಿಯ ಸಹಾಯಕ ಅಧಿಕಾರಿಗೆ ನೀಡಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಸಾಂಕ್ರಾಮಿಕದ ಸಮಯದಲ್ಲಿ ತಾವು ಕಷ್ಟ ಪಟ್ಟು ದುಡಿಯುತ್ತಿದ್ದರೂ ತಮ್ಮನ್ನು ತಪ್ಪಿತಸ್ಥರನ್ನಾಗಿ ನೋಡುತ್ತಿದ್ದಾರೆ, ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
"ನಮ್ಮ ತಂಡಗಳು 24 ಗಂಟೆ ಕೆಲಸ ಮಾಡುತ್ತಿವೆ. ಆದರೆ ನಾವು ಕೆಲಸ ಮಾಡುತ್ತಿಲ್ಲ ಎಂದು ಮಾರ್ಕ್ ಮಾಡಿಕೊಂಡ ಹಾಗಿದೆ. ಡಿಎಂ, ಇತರ ಅಧಿಕಾರಿಗಳು, ಎಸ್ಡಿಎಂ ಮತ್ತು ತಹಸೀಲ್ದಾರರು - ಎಲ್ಲರೂ ನಮ್ಮ ಮೇಲ್ವಿಚಾರಣೆ ನಡೆಸುತ್ತಿದ್ದಾರೆ, ರಿವ್ಯೂ ಮೀಟಿಂಗ್ಗಳನ್ನು ನಡೆಸುತ್ತಿದ್ದಾರೆ. ದಿನವೆಲ್ಲ ಕೋವಿಡ್ ಪ್ರಕರಣಗಳನ್ನು ಟ್ರ್ಯಾಕ್ ಮಾಡಿ ಅವರಿಗೆ ಔಷಧಿ ಕೊಟ್ಟು ಕಳೆದರೆ ನಂತರ ಸಂಜೆ ರಿವ್ಯೂ ಮೀಟಿಂಗ್ಗಳಲ್ಲಿ ನಾವು ಕೆಲಸ ಮಾಡಿದ್ದೇವೆ ಅಂತ ಸಾಬೀತುಪಡಿಸಬೇಕಾಗಿದೆ" ಎಂದು ರಾಜೀನಾಮೆ ಸಲ್ಲಿಸಿದ ವೈದ್ಯರಲ್ಲೊಬ್ಬರಾದ ಡಾ. ಶರದ್ ವೈಶ್ಯ ಹೇಳಿದ್ದಾರೆ.
ಈ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಈ ಬಿಕ್ಕಟ್ಟು ಶೀಘ್ರವೇ ಪರಿಹಾರವಾಗಲಿದೆ ಎಂದಿದ್ದಾರೆ. "ನಾವು ಈ ವೈದ್ಯರೊಂದಿಗೆ ಮಾತನಾಡುತ್ತೇವೆ. ಸಿಎಂ ಕಛೇರಿಯಿಂದಲೂ ಅವರೊಂದಿಗೆ ಸಂಭಾಷಣೆ ನಡೆದಿದೆ. ಅವರು ನಮ್ಮ ತಂಡದ ಸದಸ್ಯರು. ಈ ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆ" ಎಂದು ಡಿಎಂ ರವೀಂದ್ರ ಕುಮಾರ್ ಹೇಳಿದ್ದಾರೆ.
ಉತ್ತರ ಪ್ರದೇಶವು ದೇಶದ ಅತಿಹೆಚ್ಚು ಜನಸಂಖ್ಯೆಯುಳ್ಳ ರಾಜ್ಯವಾಗಿದ್ದು, ಕರೊನಾ ಪ್ರಕರಣಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಉನ್ನಾವ್ನಲ್ಲಿ ಹಾಲಿ 1,980 ಸಕ್ರಿಯ ಕರೊನಾ ಪ್ರಕರಣಗಳಿದ್ದು, ಕಳೆದ 24 ಗಂಟೆಗಳಲ್ಲಿ 84 ಹೊಸ ಪ್ರಕರಣಗಳು ವರದಿಯಾಗಿದ್ದು, ಯಾವುದೇ ಕರೊನಾ ಸಂಬಂಧಿತ ಸಾವುಗಳು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಅಂಕಿಅಂಶ ತಿಳಿಸಿದೆ. (ಏಜೆನ್ಸೀಸ್)