

ಬೆಂಗಳೂರು: ಸಬ್ ರಿಜಿಸ್ಟ್ರಾರ್‌ಗಳ ವರ್ಗಾವಣೆಯಲ್ಲಿ ಆಗುತ್ತಿದ್ದ ಗೊಂದಲ ತಪ್ಪಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ರಾಜ್ಯದಲ್ಲಿನ 109 ಕಚೇರಿಗಳ ಹುದ್ದೆಯನ್ನು ಮೇಲ್ದರ್ಜೆಗೆ ಏರಿಸಿ ಅಧಿಸೂಚನೆ ಹೊರಡಿಸಿದೆ.
ರಾಜ್ಯದಲ್ಲಿ ಉಪ ನೋಂದಣಿ ಕಚೇರಿಗಳನ್ನು ಕಾಲಕಾಲಕ್ಕೆ ಕೆಲಸದ ಒತ್ತಡ ಮತ್ತು ವ್ಯಾಪ್ತಿ ಹೆಚ್ಚಾದಂತೆ ಹೊಸ ಕಚೇರಿ ತೆರೆಯಲಾಗಿದೆ. ಹುದ್ದೆಗಳನ್ನು ವಿಂಗಡಣೆ ಮಾಡಿರಲಿಲ್ಲ. ಕೆಲವೊಂದು ಸ್ಥಳಗಳನ್ನು ಮಾತ್ರ ಹಿರಿಯ ನೋಂದಣಾಧಿಕಾರಿಗಳ ಹುದ್ದೆಗೆ ಮೇಲ್ದರ್ಜೆಗೆ ಏರಿಸಲಾಗಿತ್ತು.
ಇತ್ತೀಚೆಗೆ ಹಿರಿಯ ಸಬ್ ರಿಜಿಸ್ಟ್ರಾರ್ ಹುದ್ದೆಗೆ ಕಿರಿಯ ಸಬ್ ರಿಜಿಸ್ಟ್ರಾರ್‌ರನ್ನು ಹಾಗೂ ಹಿರಿಯ ಸಬ್ ರಿಜಿಸ್ಟ್ರಾರ್ ಜಾಗಕ್ಕೆ ಕಿರಿಯ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ನೊಂದ ಸಬ್ ರಿಜಿಸ್ಟ್ರಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ದೋಷಗಳನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಬೀಸಿದ ಚಾಟಿಯಿಂದ ಎಚ್ಚೆತ್ತ ಇಲಾಖೆ ಅಧಿಕಾರಿಗಳು, 109 ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ಹಿರಿಯ ನೋಂದಣಾಧಿಕಾರಿಗಳ ಹುದ್ದೆಗೆ ಉನ್ನತೀಕರಿಸಿ ಆದೇಶಿಸಿದ್ದಾರೆ.
ಈ ಪ್ರಕಾರ ಬೆಂಗಳೂರಿನಲ್ಲಿನ 5 ಜಿಲ್ಲೆಗಳಲ್ಲಿ ಇರುವ 43 ಸಬ್ ರಿಜಿಸ್ಟ್ರಾರ್ ಕಚೇರಿಗಳ 32 ಹುದ್ದೆಗಳನ್ನು ಹಿರಿಯ ನೋಂದಣಾಧಿಕಾರಿ ಹುದ್ದೆಗೆ ಮೇಲ್ದರ್ಜೆಗೆ ಏರಿಸಲಾಗಿದೆ. ಉಳಿದಂತೆ ಎಲ್ಲ ಜಿಲ್ಲೆಗಳಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿನ ಕೆಲಸದ ಒತ್ತಡದ ಮೇಲೆ ಉನ್ನತೀಕರಿಸಿ ಮಾರ್ಚ್ 19ರಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಮೇಲ್ದರ್ಜೆ ಕಚೇರಿಗಳಿಗೆ ಹಿರಿಯ ನೋಂದಣಾಧಿಕಾರಿಗಳೇ ಕರ್ತವ್ಯ ನಿರ್ವಹಿಸಬೇಕು. ಬದಲಿಗೆ ಕಿರಿಯ ಅಧಿಕಾರಿಗೆ ಅವಕಾಶ ಇಲ್ಲವೆಂದು ಉಲ್ಲೇಖಿಸಲಾಗಿದೆ.
ಮಾರ್ಗಸೂಚಿ ಪಾಲಿಸದೆ ವಿಂಗಡಣೆ: ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ಅಲ್ಲಿ ನಡೆಯುವ ದಿನನಿತ್ಯದ ದಾಖಲೆಗಳ ನೋಂದಣಿ ಹಾಗೂ ರಾಜಸ್ವ ಸಂಗ್ರಹದ ಆಧಾರದ ಮೇಲೆ ಹುದ್ದೆ ಅಳೆಯಬೇಕು. ಇದನ್ನು ಗಾಳಿಗೆ ತೂರಿ ತರಾತುರಿಯಲ್ಲಿ ಕಡಿಮೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹವಾಗುವ ಕಚೇರಿಗಳನ್ನು ಮೇಲ್ದೆರ್ಜೆಗೆ ಏರಿಸಲಾಗಿದೆ. ಕೆಲವೊಂದು ಕಚೇರಿಗಳು ಸಾವಿದಾರು ದಾಖಲೆ ನೋಂದಣಿ ಆಗಿ ನೂರಾರು ಕೋಟಿ ರಾಜಸ್ವ ಸಂಗ್ರಹವಾದರೂ ಅಂತಹ ಹುದ್ದೆಯನ್ನು ಹಿರಿಯ ದರ್ಜೆಗೆ ಏರಿಸಿಲ್ಲ ಎಂಬುದು ಅಧಿಸೂಚನೆಯಲ್ಲಿ ಕಂಡುಬಂದಿದೆ.