ನಮ್ಮದೇ ಮೊದಲ 'ದಸರಾ' ಎಂದ ಶರ್ಮಿಳಾ; ತೆಲುಗು ನಿರ್ಮಾಪಕರ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು..

Sharmiela
Published on

ಬೆಂಗಳೂರು: ನಟಿ-ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಅದಕ್ಕೆ ಪ್ರಮುಖ ಕಾರಣ, ಟೈಟಲ್​. ಹೌದು.. ಚಿತ್ರವೊಂದರ ಶೀರ್ಷಿಕೆಯ ಕಾರಣಕ್ಕಾಗಿ ಬೇಸರಗೊಂಡಿರುವ ಅವರು ಚಲನಚಿತ್ರ ವಾಣಿಜ್ಯ ಮಂಡಳಿಯ ಮೊರೆ ಹೋಗಿದ್ದಾರೆ.

ಶರ್ಮಿಳಾ ಮಾಂಡ್ರೆ ನಿರ್ಮಾಣದಲ್ಲಿ ಅವರೇ ನಾಯಕಿ ಆಗಿರುವ, ನೀನಾಸಂ ಸತೀಶ್ ನಾಯಕರಾಗಿ ಅಭಿನಯಿಸಿ ಮತ್ತು ಅರವಿಂದ ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ದಸರಾ' ಇನ್ನೇನು ಮುಗಿಯುವ ಹಂತದಲ್ಲಿದೆ ಎನ್ನುವಾಗಲೇ ಅದೇ ಹೆಸರಿನಲ್ಲಿ ಮತ್ತೊಂದು ಚಿತ್ರದ ಟೀಸರ್​-ಟ್ರೇಲರ್ ಬಿಡುಗಡೆ ಆಗಿರುವುದೇ ಇದಕ್ಕೆ ಕಾರಣ.

ನಾವು 2020ರ ಸೆಪ್ಟೆಂಬರ್ 30ರಂದು 'ದಸರಾ' ಕನ್ನಡ ಸಿನಿಮಾದ ಶೀರ್ಷಿಕೆ ನೋಂದಣಿ ಮಾಡಿಕೊಂಡಿದ್ದು, ಅದರ ಶೂಟಿಂಗ್ ಮುಗಿದು, ಅದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ ತೆಲುಗು ಚಿತ್ರ ನಿರ್ಮಾಪಕ ಸುಧಾಕರ್ ಚೆರುಕುರಿ ಅವರು ಎಸ್​ಎಲ್​ವಿ ಬ್ಯಾನರ್​ನಡಿ 'ದಸರಾ' ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದು, ಅದರ ಟೀಸರ್-ಟ್ರೇಲರ್​ ಕನ್ನಡ ಸೇರಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದಾರೆ.

ನಮ್ಮ 'ದಸರಾ' ಚಿತ್ರ ಮೊದಲೇ ಘೋಷಣೆಯಾಗಿ ಇನ್ನೇನು ಮುಗಿಯುವ ಹಂತದಲ್ಲಿರುವಾಗ ಈ ರೀತಿ ಅದೇ ಹೆಸರಿನಲ್ಲಿ ಇನ್ನೊಬ್ಬರು ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವುದರಿಂದ ನಮ್ಮ ಚಿತ್ರಕ್ಕೆ ತೀವ್ರ ತೊಂದರೆ ಆಗಲಿದೆ ಎಂದಿರುವ ಶರ್ಮಿಳಾ, ಆ ನಿರ್ಮಾಪಕರು 'ದಸರಾ' ಹೆಸರಿನಲ್ಲಿ ಸಿನಿಮಾ ಮಾಡದಂತೆ ತಡೆಯಲು ಕೋರಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net