ಶತಕೋಟಿ ಹೆಜ್ಜೆ ದಾಟಿ...:100 ಕೋಟಿ ಡೋಸ್ ವ್ಯಾಕ್ಸಿನ್, ಒಂಬತ್ತು ತಿಂಗಳಲ್ಲಿ ಭಾರತ ಸಾಧನೆ..

Front
ವಿದ್ಯುತ್ ದೀಪಗಳಲ್ಲಿ ಕಂಗೊಳಿಸಿದ ಹಂಪಿಯ ಐತಿಹಾಸಿಕ ಕಲ್ಲಿನ ರಥ.
Published on
ಜಗತ್ತನ್ನು ನಡುಗಿಸಿದ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಲಸಿಕೆ ಅಸ್ತ್ರ ಪ್ರಯೋಗದಲ್ಲಿ ಭಾರತ ಐತಿಹಾಸಿಕ ಮೈಲಿಗಲ್ಲು ನೆಟ್ಟಿದೆ. ದೇಶದಾದ್ಯಂತ ಅರ್ಹ ಫಲಾನುಭವಿಗಳಿಗೆ ನೂರು ಕೋಟಿ ಡೋಸ್ ಲಸಿಕೆ ಹಾಕುವ ಮೂಲಕ ಜಾಗತಿಕ ಸಮುದಾಯ ನಿಬ್ಬೆರಗಾಗುವಂತೆ ಮಾಡಿದೆ. ಲಸಿಕೆ ಲಭ್ಯತೆ ಆರಂಭವಾದ ಕೇವಲ ಒಂಬತ್ತು ತಿಂಗಳಲ್ಲಿ ಈ ಸಾಧನೆ ಮಾಡಿರುವುದು ಮತ್ತೊಂದು ವಿಶೇಷ.

ವ್ಯಾಕ್ಸಿನ್ ಅನುಮೋದನೆ

ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್, ಮಾಡರ್ನಾ, ಜಾನ್ಸನ್ ಅಂಡ್ ಜಾನ್ಸನ್, ಝೈಕೋವ್ ಡಿ -ಇವುಗಳ ತುರ್ತು ಬಳಕೆಗೆ ಭಾರತ ಔಷಧ ಮಹಾ ನಿಯಂತ್ರಕರು (ಡಿಸಿಜಿಐ) ಅನುಮೋದನೆ ನೀಡಿರುವ ಕೋವಿಡ್-ತಡೆ ಲಸಿಕೆಗಳು. ಭಾರತ ಆರಂಭದಲ್ಲಿ ಆಕ್ಸ್​ಫರ್ಡ್-ಅಸ್ಟ್ರಾಜೆನಿಕಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್​ನ ಮೇಕ್ ಇನ್ ಇಂಡಿಯಾ ವ್ಯಾಕ್ಸಿನ್ ಕೊವ್ಯಾಕ್ಸಿನ್​ಗೆ ಅನುಮೋದನೆ ನೀಡಿತ್ತು. ಕೋವಿಶೀಲ್ಡ್ ಲಸಿಕೆಯನ್ನು ಪುಣೆಯ ಭಾರತ ಸೆರಂ ಸಂಸ್ಥೆ (ಎಸ್​ಐಐ) ಉತ್ಪಾದಿಸುತ್ತಿದೆ. ನಂತರ, ರಷ್ಯಾದ ಸ್ಪುಟ್ನಿಕ್ ಲಸಿಕೆ ಸೇರ್ಪಡೆಯಾಯಿತು. ಅದನ್ನು ಹೈದರಾಬಾದ್​ನ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಮತ್ತು ಸೆರಂ ತಯಾರಿಸುತ್ತಿವೆ. ಮಾಡರ್ನಾ, ಜಾನ್ಸನ್ ಅಂಡ್ ಜಾನ್ಸನ್, ಝೈಕೋವ್ ಡಿ ಮುಂತಾದ ಲಸಿಕೆಗಳಿಗೂ ಅನುಮತಿ ನೀಡಲಾಗಿದ್ದು ಸ್ಥಳೀಯ ವಾಗಿ ಕ್ಲಿನಿಕಲ್ ಟ್ರಯಲ್ ನಡೆಯುತ್ತಿವೆ.

ಜ.16, 2021: ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದಲ್ಲಿ 2021 ಜನವರಿ 16 ಭಾರತದ ಪಾಲಿಗೆ ಐತಿಹಾಸಿಕ ದಿನ. ಪ್ರಧಾನಿ ನರೇಂದ್ರ ಮೋದಿ ಅಂದು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.

ಏನಿದೆ ಸ್ಥಿತಿ?: ಈವರೆಗೆ ದೇಶದ ಸುಮಾರು ಅರ್ಧದಷ್ಟು ಅರ್ಹ ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್ ಲಸಿಕೆ ಹಾಕಲಾಗಿದೆ. ಶೇಕಡ 20 ಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ.

2ನೇ ಹಂತ: 60 ವರ್ಷ ಮೀರಿದ ಎಲ್ಲ ನಾಗರಿಕರು, ಒಂದು ಅಥವಾ ಹೆಚ್ಚಿನ ನಿರ್ದಿಷ್ಟ ಅನ್ಯ-ವ್ಯಾಧಿಯಿರುವ 45-60 ವರ್ಷದೊಳಗಿನವರಿಗೆ 2ನೇ ಹಂತದಲ್ಲಿ ಲಸಿಕೆ ನೀಡಿಕೆ ಶುರುವಾಯಿತು. ಮೊದಲ ಹಂತದಲ್ಲಿ ವ್ಯಾಕ್ಸಿನ್ ಪಡೆಯದ ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೂ ನೀಡಿಕೆ ಉದ್ದೇಶ.

  • ಏ.1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಲು ಅರ್ಹರು ಎಂದು ಘೋಷಿಸಲಾಯಿತು.
  • ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಲು ಅರ್ಹರು ಎಂದು ಏಪ್ರಿಲ್ 19ರಂದು ಘೋಷಣೆ.
  • ಮೊದಮೊದಲು ಲಸಿಕೆ ಪಡೆಯಲು ಆರೋಗ್ಯ ಸೇತು ಮತ್ತು ಕೋವಿನ್ ಆಪ್​ನಲ್ಲಿ ಹೆಸರು ನೋಂದಾಯಿಸ ಬೇಕಿತ್ತು. ನಂತರ ನಿಯಮ ಸಡಿಲಿಸಿ ನೇರವಾಗಿ ಲಸಿಕಾ ಕೇಂದ್ರಗಳಿಗೆ ತೆರಳಿ ಚುಚ್ಚುಮದ್ದು ಹಾಕಿಸಿಕೊಳ್ಳಲು ಅವಕಾಶ ಕಲ್ಪಿಸಲಾಯಿತು.
  • 2021 ಏ.8: ನಾಲ್ಕು ದಿನ, ಅಂದರೆ ಏಪ್ರಿಲ್ 11ರಿಂದ 14ರ ವರೆಗೆ ‘ಲಸಿಕೆ ಉತ್ಸವ’ ನಡೆಸಲು ಪ್ರಧಾನಿ ನರೇಂದ್ರ ಮೋದಿ ಕರೆ. ಅಭಿಯಾನಕ್ಕೆ ವೇಗ ನೀಡುವುದು ಉದ್ದೇಶ.

ದಾಖಲೆ ನೋಂದಣಿ: ಏ.28ರಂದು ಒಂದೇ ದಿನ 1.33 ಕೋಟಿ ಜನರು ಲಸಿಕೆ ಪಡೆಯಲು ನೋಂದಾಯಿಸಿಕೊಂಡಿದ್ದು ದಾಖಲೆಯಾಗಿದೆ.

ಲಸಿಕೆ ಪಡೆದ ಮೋದಿ: ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಏಮ್ಸ್​ನಲ್ಲಿ ಮಾರ್ಚ್ 1ರಂದು ಕೊವ್ಯಾಕ್ಸಿನ್ ವ್ಯಾಕ್ಸಿನ್​ನ ಮೊದಲ ಡೋಸ್ ಮತ್ತು ಏಪ್ರಿಲ್ 8ರಂದು ಎರಡನೇ ಡೋಸ್ ಪಡೆದರು.

ಒಂದೇ ದಿನದ ವಿಶ್ವ ದಾಖಲೆ

  • ಜೂ.21: 82,70,000 ಡೋಸ್ ನೀಡಿಕೆ
  • ಆ.16: 80,81,000 ಡೋಸ್.
  • ಆ.27: 1 ಕೋಟಿಗೂ ಅಧಿಕ ಡೋಸ್ ಮೂಲಕ ವಿಶ್ವ ದಾಖಲೆ
  • ಆ31: ಇನ್ನೊಂದು ಜಾಗತಿಕ ದಾಖಲೆ; 1.2 ಕೋಟಿ ಡೋಸ್ ನೀಡಿಕೆ
  • ಸೆ.17: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದು 2.5 ಕೋಟಿಗೂ ಅಧಿಕ ಡೋಸ್ ವ್ಯಾಕ್ಸಿನ್ ನೀಡಿ ವಿಶ್ವ ದಾಖಲೆಯ ಹೊಸ ಅಧ್ಯಾಯ.

ದೇಶದಲ್ಲಿ ನೀಡಲಾಗುತ್ತಿರುವ ಕೋವಿಡ್ ಲಸಿಕೆ ಡೋಸ್​ಗಳ ಸಂಖ್ಯೆ ಗುರುವಾರ 100 ಕೋಟಿ ದಾಟಿದೆ. ಆ ಮೂಲಕ ಭಾರತ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಇದರಿಂದ ಭಾರತ ಬಲವಾದ ರಕ್ಷಾಕವಚ ಹೊಂದಿದಂತಾಗಿದೆ. | ನರೇಂದ್ರ ಮೋದಿ ಪ್ರಧಾನಿ

ಮುಂದಿನ ಗುರಿ?: ಈ ವರ್ಷಾಂತ್ಯದೊಳಗೆ ಎಲ್ಲ 94.4 ಕೋಟಿ ವಯಸ್ಕರಿಗೆ ಲಸಿಕೆ ಹಾಕುವುದು

ದೇಶಾದ್ಯಂತ ಸಂಭ್ರಮ: ಶತಕೋಟಿ ಡೋಸ್ ಸಾಧನೆಯನ್ನು ದೇಶದಾದ್ಯಂತ ವೈವಿಧ್ಯಮಯವಾಗಿ ಆಚರಿಸಲಾಯಿತು.

ಪಂಚ ರಾಜ್ಯ: ಉತ್ತರ ಪ್ರದೇಶ, ಮಹಾರಾಷ್ಟ್ರ, ಬಂಗಾಳ, ಗುಜರಾತ್ ಮತ್ತು ಮಧ್ಯಪ್ರದೇಶ -ಇವು ಅತಿ ಹೆಚ್ಚು ಡೋಸ್ ಲಸಿಕೆ ಹಾಕಿದ ರಾಜ್ಯಗಳಾಗಿವೆ.

664 ಕೋಟಿ: ಜಗತ್ತಿನಾದ್ಯಂತ ಇದುವರೆಗೆ 664 ಕೋಟಿಗೂ ಅಧಿಕ ಡೋಸ್ ಲಸಿಕೆ ಹಾಕಲಾಗಿದ್ದು ಆ ಪೈಕಿ ಭಾರತದ ಪಾಲು ಶೇಕಡ 15ರಷ್ಟಿದೆ. ಚೀನಾ ಇದುವರೆಗೆ 233 ಕೋಟಿ ಡೋಸ್ ಚುಚ್ಚುಮದ್ದು ಹಾಕಿದೆ ಎಂದು ಜಾನ್ಸ್ ಹಾಪ್ಕಿನ್ಸ್ ಯುನಿವರ್ಸಿಟಿ ತಿಳಿಸಿದೆ.

18,454 ಹೊಸ ಕೇಸ್: ಭಾರತದಲ್ಲಿ ಗುರುವಾರ ಬೆಳಿಗ್ಗೆವರೆಗಿನ ಒಂದು ದಿನದ ಅವಧಿಯಲ್ಲಿ ಕರೊನಾ ಸೋಂಕಿನ 18,454 ಹೊಸ ಕೇಸ್​ಗಳು ಪತ್ತೆಯಾಗಿವೆ. 160 ಜನರು ಮೃತಪಟ್ಟಿದ್ದಾರೆ. 17,561 ಮಂದಿ ಗುಣಮುಖರಾಗಿದ್ದಾರೆ.

ಲಸಿಕೆಯ ಹೆಗ್ಗುರುತುಗಳು

  • 2021ರ ಮೊದಲ ತ್ರೖೆಮಾಸಿಕದಲ್ಲಿ ಲಸಿಕೆ ಗಳಿಗೆ ಅನುಮೋದನೆ ನೀಡಿ ವಿತರಣೆ ಆರಂಭಿಸಲಾಗು ವುದೆಂದು 2020ರ ಸೆಪ್ಟೆಂಬರ್​ನಲ್ಲಿ ಅಂದಿನ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದರು.
  • 2021 ಜ.1: ಕೋವಿಶೀಲ್ಡ್​ಗೆ ಡಿಸಿಜಿಐ ಅನುಮೋದನೆ.
  • ಜ.2: ಕೊವ್ಯಾಕ್ಸಿನ್​ಗೆ ಅನುಮೋದನೆ.

ಮೊದಲ ದಿನ: ಲಸಿಕೆ ಅಭಿಯಾನ ಆರಂಭದ ಮೊದಲ ದಿನ 1,65,714 ಜನರು ಲಸಿಕೆ ಪಡೆದುಕೊಂಡರು. ಅಭಿಯಾನದ ಮೊದಲ ಹಂತದಲ್ಲಿ ಆರೋಗ್ಯ ಕಾಯಕರ್ತರು ಮತ್ತು ಪೊಲೀಸರು, ಅರೆಸೇನಾ ಪಡೆಗಳು, ನೈರ್ಮಲ್ಯ ಕಾರ್ವಿುಕರು ಮತ್ತು ವಿಪತ್ತು ನಿರ್ವಹಣಾ ಸ್ವಯಂಸೇವಕರ ಸಹಿತ ಮುಂಚೂಣಿ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡುವ ಯೋಜನೆ ರೂಪಿಸಲಾಗಿತ್ತು. ಮಾರ್ಚ್ 1ರೊಳಗೆ ಈ ವಿಭಾಗಗಳ 1.4 ಕೋಟಿ ಜನರಿಗೆ ಲಸಿಕೆ ಹಾಕಲಾಯಿತು.

ಭಾರತ ಝುಗಮಗ: 100 ಕೋಟಿ ದಾಖಲೆಯ ನೆನಪಿಗಾಗಿ ಕುತುಬ್ ಮಿನಾರ್ ನಿಂದ ಹಿಡಿದು ಕರ್ನಾಟಕದ ಹಂಪಿಯಲ್ಲಿ ರುವ ವಿಜಯವಿಠ್ಠಲ ದೇಗುಲ, ಕಲ್ಲಿನ ರಥ, ಗಜಶಾಲೆ, ವಿಜಯಪುರ ಜಿಲ್ಲೆಯ ಗೋಳಗುಮ್ಮಟ, ಐಹೊಳೆ, ಬೀದರ್ ಕೋಟೆಯನ್ನು ತ್ರಿವರ್ಣದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗುತ್ತಿ್ತೆ.

ಜಾಗತಿಕ ಶ್ಲಾಘನೆ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ), ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ವಿಶ್ವ ಬ್ಯಾಂಕ್ ಮೊದಲಾದ ಜಾಗತಿಕ ವೇದಿಕೆಗಳು ಭಾರತದ ಲಸಿಕೆ ಅಭಿಯಾನ ಹಾಗೂ ಅದು ಮಾಡಿದ ಸಾಧನೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿವೆ.

ಮೈಲಿಗಲ್ಲು-ದಾಖಲೆ

  • ಏ.10: ಕರೊನಾ ಲಸಿಕೆಯ 10 ಕೋಟಿ ಡೋಸ್ ನೀಡಿಕೆ ಪೂರ್ಣ
  • ಮೇ 26: 20 ಕೋಟಿ ಡೋಸ್
  • ಜೂ.23: 30 ಕೋಟಿ ಡೋಸ್
  • ಆ.6: 50 ಕೋಟಿ ಡೋಸ್ ಲಸಿಕೆ
  • ಅ.2: 90 ಕೋಟಿ ಡೋಸ್ ನೀಡಿಕೆ
  • ಅ.21: ಶತ ಕೋಟಿ ಡೋಸ್ ಸಾಧನೆ.

ಪ್ರಬಲ ರಕ್ಷಾ ಕವಚ

ಭಾರತ ಗುರುವಾರ ಬೆಳಗ್ಗೆ ಶತಕೋಟಿ ಡೋಸ್ ಲಸಿಕೆ ಗಡಿ ದಾಟುತ್ತಿದ್ದಂತೆಯೇ ದೆಹಲಿಯ ಆರ್​ಎಂಎಲ್ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಇದೊಂದು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿ ಅದಕ್ಕಾಗಿ ಇಡೀ ದೇಶಕ್ಕೆ ಅಭಿನಂದನೆ ಸಲ್ಲಿಸಿದರು. ‘ಇದು ದೇಶದ ವಿಜ್ಞಾನ, ಸಂಸ್ಥೆಗಳು, 130 ಕೋಟಿ ಜನರ ಸಾಂಘಿಕ ಉತ್ಸಾಹದ ಫಲಶ್ರುತಿಯಾಗಿದೆ. ಭಾರತ ಇತಿಹಾಸ ಸೃಷ್ಟಿಸಿದೆ. ನಮ್ಮ ವಿಜ್ಞಾನಿಗಳು, ವೈದ್ಯರು, ದಾದಿಯರು ಮತ್ತು ಈ ಸಾಧನೆ ಮಾಡಲು ಶ್ರಮಿಸಿದ ಎಲ್ಲರಿಗೂ ಧನ್ಯವಾದ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net