

ಉತ್ತರಪ್ರದೇಶ: ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿದ್ದು ಆ ಸಂಬಂಧ ವಿರೋಧ ಹಾಗೂ ಒಂದಷ್ಟು ಸಮರ್ಥನೆ ಹೊರ ಹೊಮ್ಮುತ್ತಲೂ ಇದೆ. ಇದೀಗ ಸಚಿವರೊಬ್ಬರು ಪೆಟ್ರೋಲ್ ಬೆಲೆ ಏರಿಕೆಯನ್ನು ಮತ್ತೊಂದು ರೀತಿಯಲ್ಲಿ ಸಮರ್ಥನೆಗೆ ಮುಂದಾಗಿ ಅಚ್ಚರಿ ಮೂಡಿಸಿದ್ದಾರೆ. ಅವರ ಪ್ರಕಾರ, ದೇಶದ ಶೇ. 95 ಮಂದಿಗೆ ಪೆಟ್ರೋಲ್ ಅಗತ್ಯವೇ ಇಲ್ಲವಂತೆ!
ದೇಶದಲ್ಲಿ ಕೆಲವೇ ಮಂದಿ ನಾಲ್ಕು ಚಕ್ರದ ವಾಹನಗಳನ್ನು ಬಳಸುತ್ತಿದ್ದಾರೆ, ಅವರಿಗಷ್ಟೇ ಪೆಟ್ರೋಲ್ ಅಗತ್ಯವಿದೆ. ಉಳಿದಂತೆ ಶೇ. 95 ಮಂದಿಗೆ ಪೆಟ್ರೋಲ್ ಅಗತ್ಯವೇ ಇಲ್ಲ ಎಂಬುದಾಗಿ ಈ ಸಚಿವರು ಹೇಳಿದ್ದಾರೆ. ದೇಶದಲ್ಲಿ ಶತಕೋಟಿಗೂ ಅಧಿಕ ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ. ಪೆಟ್ರೋಲ್ ಬೆಲೆಯನ್ನು ತಲಾ ಆದಾಯಕ್ಕೆ ಹೋಲಿಸಿದರೆ ಆ ಬೆಲೆ ಕಡಿಮೆಯೇ ಎಂದೂ ಅವರು ಹೇಳಿದ್ದಾರೆ.
ಅಂದಹಾಗೆ ಈ ರೀತಿಯಲ್ಲಿ ಪೆಟ್ರೋಲ್ ಬೆಲೆಯನ್ನು ಸಮರ್ಥನೆ ಮಾಡಿಕೊಂಡಿರುವುದು ಉತ್ತರಪ್ರದೇಶದ ಸಚಿವ ಉಪೇಂದ್ರ ತಿವಾರಿ. ಮತ್ತೊಂದೆಡೆ ಗುರುವಾರವೂ ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಕಂಡಿದೆ. ಸತತ ಎರಡನೇ ದಿನವೂ ಪೆಟ್ರೋಲ್ ಬೆಲೆ ಏರಿಕೆ ಕಂಡಿದ್ದು, ಒಂದೇ ಸಲಕ್ಕೆ ಲೀಟರ್ಗೆ 45 ಪೈಸೆ ಏರಿದೆ. (ಏಜೆನ್ಸೀಸ್)