

ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಮುನ್ನಡೆ ಸಾಧಿಸಿದೆ. ದೇಶದಲ್ಲಿ ಪ್ರತಿದಿನ ಸುಮಾರು ಒಂದು ಲಕ್ಷ ಜನರ ತಪಾಸಣೆ ನಡೆಸಲಾಗುತ್ತಿದೆ. ಇದಕ್ಕೆ ಅಗತ್ಯವಾಗಿರುವ ಕ್ರಮವನ್ನು ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಐಸಿಎಂಆರ್ ಕೈಗೊಂಡಿವೆ. ಪರೀಕ್ಷೆ ಸಾಮರ್ಥ್ಯ ಹೆಚ್ಚಿದಂತೆ ರೋಗ ಪತ್ತೆ, ನಿಖರ ಅಂಕಿ-ಅಂಶ ಲಭ್ಯವಾಗುತ್ತದೆ. ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅನುಕೂಲ ಆಗಲಿದೆ. ಕೋವಿಡ್ ತಪಾಸಣೆ ಕಿಟ್ ಉತ್ಪಾದಿಸುವ ಭಾರತದ ಸಾಮರ್ಥ್ಯ ಕೂಡ ಸುಧಾರಿಸಿದ್ದು, ದೈನಿಕ ಪರೀಕ್ಷಾ ಸಾಮರ್ಥ್ಯವೂ ಹೆಚ್ಚಾಗಿದೆ. ಕರೊನಾ ಸಾಂಕ್ರಾಮಿಕ ರೋಗದಿಂದ ಮೃತಪಡುವವರ ದರ ಭಾರತದಲ್ಲಿ ಜಗತ್ತಿನಲ್ಲೇ ಅತಿ ಕಡಿಮೆಯಾಗಿದೆ. ಜಾಗತಿಕ ಮರಣ ದರ ಸುಮಾರು ಶೇ. 7ರಿಂದ 7.5 ಆಗಿದ್ದು, ಭಾರತದಲ್ಲಿ ಶೇ. 3.2 ಆಗಿದೆ. ಕೆಲವು ರಾಜ್ಯಗಳಲ್ಲಿ ಈ ದರ ಇನ್ನೂ ಕಡಿಮೆಯಿದೆ. ಗುಣಮುಖ ದರ ದರ ಶೇ. 31.7 ಆಗಿದೆ.
1.ಕರೊನಾ ಲಕ್ಷಣ ಇರುವವರು 2. ಸೋಂಕಿತರ ಸಂಪರ್ಕಕ್ಕೆ ಬಂದಿರುವವರು 3. ವಿದೇಶದಿಂದ ಭಾರತಕ್ಕೆ ವಾಪಸಾಗಿರುವವರು 4. ತಮ್ಮ ಊರಿಗೆ ಮರಳಿರುವ ವಲಸೆ ಕಾರ್ವಿುಕರು 5. ರ್ಯಾಂಡಮ್ ಪರೀಕ್ಷೆ (ಒಂದು ಪ್ರದೇಶದಲ್ಲಿ ಐಚ್ಛಿಕವಾಗಿ ಕೆಲ ಮಾದರಿ ಪರೀಕ್ಷೆ )
ಭಾರತ ಇದುವರೆಗೆ ದಿನಕ್ಕೆ 75 ಸಾವಿರದಿಂದ 80 ಸಾವಿರದಷ್ಟು ಮಾದರಿಗಳನ್ನು ಸೋಂಕು ಖಾತರಿಗಾಗಿ ಪರೀಕ್ಷೆ ಮಾಡುತ್ತಿತ್ತು. ಆ ಸಾಮರ್ಥ್ಯ ಇದೀಗ ಒಂದು ಲಕ್ಷಕ್ಕೆ ಏರಿದೆ. ಮೈಲ್ಯಾಬ್ ಇದುವರೆಗೆ ಸುಮಾರು 20 ರಾಜ್ಯಗಳ 140 ಪ್ರಯೋಗಾಲಯ ಹಾಗೂ ಆಸ್ಪತ್ರೆಗಳಿಗೆ 6,50,000 ಪರೀಕ್ಷೆ ನಡೆಸಿಕೊಟ್ಟಿದೆ.
ಕರೊನಾ ಪರೀಕ್ಷೆಗೆ ಅಗತ್ಯವಾದ ಕಿಟ್ಗಳನ್ನು ಉತ್ಪಾದಿಸುವಲ್ಲಿ ಭಾರತದ ದೇಶೀಯ ಕಂಪನಿ ಕೂಡ ಸಮರ್ಥವಿದೆ ಎಂಬುದನ್ನು ಪುಣೆ ಮೂಲದ ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್ ತೋರಿಸಿದೆ. ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಜೊತೆ ಸೇರಿ ಅದು ಈ ಸಾಧನೆ ಮಾಡಿದೆ. ಪರೀಕ್ಷೆ ನಡೆಸಲು ಕೇಂದ್ರೀಯ ಔಷಧ ಮಾನಕ ನಿಯಂತ್ರಣ ಸಂಸ್ಥೆಯ (ಸಿಡಿಎಸ್ಸಿಒ) ಅನುಮತಿ ಗಳಿಸಿದ ಸ್ಥಳೀಯ ಕಂಪನಿಗಳಲ್ಲಿ ಮೈಲ್ಯಾಬ್ ಒಂದಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಾನದಂಡ ಪೂರೈಸುವ ಕಿಟ್ಗಳನ್ನು ಸರಬರಾಜು ಮಾಡಲು ಸಿಡಿಎಸ್ಸಿಒ ನಂತರ ಇನ್ನೂ ಆರು ಕಂಪನಿಗಳಿಗೆ ಅನುಮತಿ ನೀಡಿದೆ.