

ವಾಷಿಂಗ್ಟನ್: ಅಂತಾರಾಷ್ಟ್ರೀಯ ಮಟ್ಟದ ಮಹತ್ವದ ಬೆಳವಣಿಗೆಯೊಂದರಲ್ಲಿ ಕರೊನಾ ವೈರಸ್ ಸೋಂಕಿನ ವಿಚಾರದಲ್ಲಿ ಚೀನಾವನ್ನು ಹೊಣೆಗಾರನನ್ನಾಗಿ ಮಾಡಿ ಅದರ ಮೇಲೆ ನಿರ್ಬಂಧ ಹೇರುವ ಬಗ್ಗೆ ಅಮೆರಿಕ ಚಿಂತನೆ ನಡೆಸಿದೆ. ಇದಕ್ಕೆ ಸಂಬಂಧಿಸಿದ ಶಾಸನವೊಂದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಶೀಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕರೊನಾ ವೈರಸ್ ಚೀನಾದ ವುಹಾನ್ ನಗರದಲ್ಲಿ ಕಳೆದ ವರ್ಷ ಮೊಟ್ಟ ಮೊದಲ ಬಾರಿಗೆ ಪತ್ತೆಯಾಗಿತ್ತು. ಜಗತ್ತಿನಾದ್ಯಂತ 43 ಲಕ್ಷ ಜನರಿಗೆ ಸೋಂಕು ತಗುಲಿದ್ದು 3 ಲಕ್ಷ ಜನ ಬಲಿಯಾಗಿದ್ದಾರೆ. ಅಮೆರಿಕ ಒಂದರಲ್ಲೇ 85,000 ಸಾವು ಇದೇ ಕಾರಣಕ್ಕೆ ಸಂಭವಿಸಿದೆ.
ಬುಧವಾರ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪತ್ರಕರ್ತರು ಚೀನಾ ಮೇಲೆ ನಿರ್ಬಂಧದ ವಿಚಾರದಲ್ಲಿ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿದ ಟ್ರಂಪ್, ನಾನು ಖಚಿತವಾಗಿ ಈ ಸಂಬಂಧದ ಶಾಸನದ ಕುರಿತು ಗಮನಿಸುತ್ತೇನೆ. ಚೀನಾ ಮೇಲೆ ನಿರ್ಬಂಧ ಹೇರಬೇಕೆಂಬ ಬೇಡಿಕೆ ಅಮೆರಿಕನ್ನರಿಂದ ಇದ್ದು, ಆ ಶಾಸನದ ಪ್ರತಿಯನ್ನು ನಾನಿನ್ನೂ ನೋಡಿಲ್ಲ ಎಂದರು.
ಸೆನೆಟರ್ ಲಿಂಡ್ಸೆ ಗ್ರಹಾಂ ಮತ್ತು ಇತರೆ ಎಂಟು ಸೆನೆಟರ್ಗಳು ಮಂಗಳವಾರ ಕೋವಿಡ್ 19 ಅಕೌಂಟೆಬಿಲಿಟಿ ಆ್ಯಕ್ಟನ್ನು ಮಂಡಿಸಿದ್ದಾರೆ. ಇದನ್ನು ಪ್ರಮಾಣೀಕರಿಸಿ ಅಧ್ಯಕ್ಷರು ಕಾಂಗ್ರೆಸ್ ಮುಂದೆ ಇರಿಸಬೇಕು. ಮುಂದಿನ ಅರವತ್ತು ದಿನಗಳ ಒಳಗೆ ಚೀನಾ ಕೋವಿಡ್ 19ಕ್ಕೆ ಸಂಬಂಧಿಸಿದ ಅಮೆರಿಕ ನೇತೃತ್ವದ ತನಿಖೆಗೆ ಅಗತ್ಯವಿರುವ ಎಲ್ಲ ಮಾಹಿತಿಗಳನ್ನೂ ಒದಗಿಸುವುದಕ್ಕೆ ಹೊಣೆಗಾರರನ್ನಾಗಿಸುವುದು. ಇದಲ್ಲದೆಯೂ ಅಸೆಟ್ ಫ್ರೀಝ್ ಮಾಡುವುದು, ಪ್ರಯಾಣ ನಿಷೇಧಿಸುವುದು, ವಿಸಾ ಸೌಲಭ್ಯ ಹಿಂಪಡೆಯುವುದು ಸೇರಿ ಕೆಲವು ನಿರ್ಬಂಧಗಳನ್ನು ಅಧ್ಯಕ್ಷರೇ ಹೇರಬಹುದಾಗಿದೆ.(ಏಜೆನ್ಸೀಸ್)