

ನವದೆಹಲಿ: ಸಾಲ ಮರುಪಾವತಿ ವಿಚಾರದಲ್ಲಿ ಕಾನೂನು ಹೋರಾಟದ ಮೊರೆ ಹೋಗಿ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ತಮ್ಮ ವರಸೆ ಬದಲಾಯಿಸಿಕೊಂಡಿದ್ದು, ಶೇಕಡ 100ಕ್ಕೆ 100 ಸಾಲವನ್ನೂ ಮರುಪಾವತಿಸುತ್ತೇನೆ, ನನ್ನ ವಿರುದ್ಧದ ಎಲ್ಲ ಕೇಸ್ ಕ್ಲೋಸ್ ಮಾಡಿ ಎಂದು ಅಂಗಾಲಾಚತೊಡಗಿದ್ದಾರೆ.
ಭಾರತಕ್ಕೆ ಗಡಿಪಾರು ಮಾಡುವ ವಿಚಾರದಲ್ಲಿ ಲಂಡನ್ನಲ್ಲಿದ್ದುಕೊಂಡೇ ತೀವ್ರ ಹೋರಾಟ ನಡೆಸುತ್ತಿರುವ ಮಲ್ಯ, ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ ಭಾರತ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅದೂ ಟ್ವೀಟ್ ಮಾಡುವ ಮೂಲಕ!
ಕೋವಿಡ್ 19 ಪರಿಹಾರ ಪ್ಯಾಕೇಜ್ ಘೋಷಿಸಿದ ಸರ್ಕಾರವನ್ನು ಅಭಿನಂದಿಸುತ್ತೇನೆ. ಅವರು ಅವರಿಗೆ ಬೇಕಾದಷ್ಟು ಕರೆನ್ಸಿಯನ್ನು ಮುದ್ರಿಸಬಹುದು. ಆದರೆ, ಆರ್ಥಿಕತೆಗೆ ಚಿಕ್ಕ ಕೊಡುಗೆ ಕೊಡುವ ನನ್ನಂಥ ವ್ಯಕ್ತಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಾಲವನ್ನು ಶೇಕಡ 100ರಷ್ಟೂ ಪಾವತಿಸುತ್ತೇನೆ ಎಂದರೂ ನಿರಂತರವಾಗಿ ನಿರ್ಲಕ್ಷಿಸುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
ಅವರ ಈ ಟ್ವೀಟ್ ಸರ್ಕಾರವನ್ನು ಅಂಗಾಲಾಚುವಂತೆ ಕಂಡರೂ ಅಲ್ಲೊಂದು ವ್ಯಂಗ್ಯವಿದೆ, ಲೇವಡಿ ಇದೆ, ರಾಜಕೀಯ ಕಂಪು ಇರುವುದು ಕಂಡುಬರುತ್ತದೆ. ಅವರ ಈ ಟ್ವೀಟ್ ಅನ್ನು ಹತ್ತಿರ ಹತ್ತಿರ 4 ಸಾವಿರ ಜನ ಮೆಚ್ಚಿದ್ದು, 700ಕ್ಕೂ ಹೆಚ್ಚು ಜನ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆ ಪ್ರತಿಕ್ರಿಯೆಗಳಲ್ಲೂ ಅಂಥದ್ದೇ ಲೇವಡಿ, ವ್ಯಂಗ್ಯ, ಹಾಸ್ಯಗಳೂ ಇವೆ!.