More

    ರೌಡಿ ಮೂಲಕ ಹಣ ವಸೂಲಿ: ಸಿಸಿಬಿ ಎಸಿಪಿ ಮತ್ತು ಇನ್​ಸ್ಪೆಕ್ಟರ್​ಗಳ ಖತರ್​ನಾಕ್ ಐಡಿಯಾ!

    ಬೆಂಗಳೂರು: ರೌಡಿಶೀಟರ್ ಮೂಲಕ ಸಿಗರೇಟ್ ಸಗಟು ವ್ಯಾಪಾರಿಗಳಿಂದ ಸಿಸಿಬಿ ಎಸಿಪಿ ಮತ್ತು ಇನ್​ಸ್ಪೆಕ್ಟರ್​ಗಳು ಲಕ್ಷಾಂತರ ರೂ. ಲಂಚ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ. ಅಮಾನತುಗೊಂಡಿರುವ ಎಸಿಪಿ ಪ್ರಭು ಶಂಕರ್ ಮತ್ತು ಇನ್​ಸ್ಪೆಕ್ಟರ್​ಗಳಾದ ಅಜಯ್ ಮತ್ತು ನಿರಂಜನ್ ಸೇರಿ ಇತರ ಆರೋಪಿಗಳ ವಿರುದ್ಧ ಪ್ರತ್ಯೇಕ ಎಫ್​ಐಆರ್ ದಾಖಲಾಗಿದೆ. ಕಳ್ಳರನ್ನು ಬಂಧಿಸಬೇಕಾಗಿದ್ದ ಪೊಲೀಸರಿಗೇ ಇದೀಗ ಬಂಧನ ಭೀತಿ ಶುರುವಾಗಿದೆ.

    ಇದನ್ನೂ ಓದಿ: ಮದ್ಯಪ್ರಿಯರಿಗಷ್ಟೇ ಅಲ್ಲ, ಮದ್ಯ ಮಾರಾಟಗಾರರಿಗೂ ದೀದಿ ನಾಡಲ್ಲಿ ಭಾರಿ ಸಂಕಷ್ಟ!

    ಕರೊನಾ ಲೌಕ್​ಡೌನ್ ವೇಳೆ ಮದ್ಯಪಾನ ಮತ್ತು ಧೂಮಪಾನಕ್ಕೂ ನಿರ್ಬಂಧ ಹೇರಲಾಗಿತ್ತು. ಆದರೆ, ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಸಿಗರೇಟ್ ಮಾರಾಟ ಎಲ್ಲೆಡೆ ನಡೆಯುತ್ತಿತ್ತು. ಇದನ್ನು ತಿಳಿದ ಎಸಿಪಿ ಪ್ರಭುಶಂಕರ್, ಪರಿಚಯಸ್ಥ ರಿಯಲ್​ಎಸ್ಟೇಟ್ ಏಜೆಂಟ್ ಭೂಷಣ್ ಮತ್ತು ಯಲಹಂಕ ಠಾಣೆ ರೌಡಿಶೀಟರ್ ರಾಜೇಂದ್ರಬಾಬು ಮೂಲಕ ಸಿಗರೇಟ್ ಸಗಟು ವ್ಯಾಪಾರಿಗಳ ಬಳಿ ಡೀಲ್ ಕುದುರಿಸಿದ್ದರು. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಪ್ರಧಾನ ಕಚೇರಿಯ ಕೂಗಳತೆ ದೂರದಲ್ಲಿದ್ದ ಪ್ರಮುಖ ಸಿಗರೇಟ್ ಸಗಟು ವ್ಯಾಪಾರಿ ಎಂಕೆ ಆಂಡ್ ಸನ್ಸ್​ನ ಆದಿಲ್ ಅಜೀಜ್ ಸೇರಿ 8 ವ್ಯಾಪಾರಿಗಳನ್ನು ಸಂಪರ್ಕ ಮಾಡಿದ್ದರು. ಲಾಕ್​ಡೌನ್ ವೇಳೆ ಸಿಗರೇಟ್ ಮಾರಲು ಅವಕಾಶ ನೀಡುತ್ತೇನೆ. ಸಿಸಿಬಿಯಿಂದ ಮತ್ತು ಪೊಲೀಸರ ಕಡೆಯಿಂದ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಎಸಿಪಿ ಭರವಸೆ ನೀಡಿದ್ದರು.

    ಇದನ್ನೂ ಓದಿ: 54 ವರ್ಷದ ಮಹಿಳೆಗೆ ಅವಳಿ ಮಕ್ಕಳು, ಪತಿಗೆ 64 ವರ್ಷ- ದಂಪತಿಯ ಬದುಕೇ ಒಂದು ಕರುಣಾಜನಕ ಕಥೆ

    ಹೆಚ್ಚಿನ ಲಾಭದ ಆಸೆಯಿಂದ ಸಿಗರೇಟ್ ಸಗಟು ವ್ಯಾಪಾರಿಗಳು ಡೀಲ್​ಗೆ ಒಪ್ಪಿದ್ದರು. ರಾಜೇಂದ್ರಬಾಬು ಮತ್ತು ಭೂಷಣ್​ನನ್ನು ವ್ಯಾಪಾರಿಗಳ ಬಳಿಗೆ ಕಳುಹಿಸಿ ಏಪ್ರಿಲ್ ಮೊದಲ ವಾರ ಹಂತಹಂತವಾಗಿ ಎಸಿಪಿ 62 ಲಕ್ಷ ರೂ. ವಸೂಲಿ ಮಾಡಿದ್ದರು. ಬಳಿಕ ನಿರಂತರವಾಗಿ ಸಿಗರೇಟ್ ಸಗಟು ವ್ಯಾಪಾರಿಗಳ ಸಂಪರ್ಕದಲ್ಲಿದ್ದವರಿಗೆ ಅನುಕೂಲ ಮಾಡಿಕೊಟ್ಟು ಮತ್ತಷ್ಟು ಹಣ ವಸೂಲಿ ಮಾಡಿದ್ದರು. ಈ ಎಲ್ಲ ವಿಚಾರವೂ ಸಿಸಿಬಿ ಡಿಸಿಪಿ ಕೆ.ಪಿ. ರವಿಕುಮಾರ್ ನಡೆಸಿದ ಆಂತರಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಆಧಾರದ ಮೇಲೆಯೇ ಕಾಟನ್​ಪೇಟೆ ಠಾಣೆಯಲ್ಲಿ ಪ್ರಭುಶಂಕರ್, ಭೂಷಣ್, ರಾಜೇಂದ್ರ ಬಾಬು ಸೇರಿ ಇತರರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

    ಇದನ್ನೂ ಓದಿ: ಸ್ಥಳೀಯ ಉತ್ಪನ್ನಗಳ ಮಹತ್ವ ತಿಳಿಸಿದೆ ಕೊವಿಡ್​-19, ಸ್ವಾವಲಂಬಿಯಾಗುವುದೇ ಗುರಿ: ಪ್ರಧಾನಿ ಮೋದಿ

    52 ಲಕ್ಷ ರೂ. ಮಾತ್ರ ಜಪ್ತಿ: ಸಿಗರೇಟ್ ಸಗಟು ವ್ಯಾಪಾರಿಗಳಿಗೆ ಕಾಳಸಂತೆ ವ್ಯಾಪಾರಕ್ಕೆ ಸಾಥ್ ಕೊಟ್ಟು ಎಸಿಪಿ ಪ್ರಭುಶಂಕರ್ ಲಕ್ಷಾಂತರ ರೂ. ವಸೂಲಿ ಮಾಡಿದ್ದರು. ಇನ್​ಸ್ಪೆಕ್ಟರ್​ಗಳಾದ ಅಜಯ್ ಮತ್ತು ನಿರಂಜನ್ ಲಾಕ್​ಡೌನ್ ವೇಳೆ ಪ್ರತ್ಯೇಕ ಕಡೆ ನಾಲ್ವರು ವ್ಯಾಪಾರಿಗಳ ಮೇಲೆ ದಾಳಿ ನಡೆಸಿ 37 ಲಕ್ಷ ರೂ. ವಸೂಲಿ ಮಾಡಿದ್ದರು. ಇದೇ ರೀತಿ ಎಸಿಪಿ ಮತ್ತು ಇನ್​ಸ್ಪೆಕ್ಟರ್​ಗಳ ತಂಡಗಳು ಒಟ್ಟಾರೆ 1.75 ಕೋಟಿ ರೂ. ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಸಿಸಿಬಿ ಪೊಲೀಸರು ಕೇವಲ 52 ಲಕ್ಷ ರೂ. ಜಪ್ತಿ ಮಾಡಿದ್ದಾರೆ. ಮುಂದಿನ ತನಿಖೆಯನ್ನು ಚಿಕ್ಕಪೇಟೆ ಸಹಾಯಕ ಪೊಲೀಸ್ ಆಯುಕ್ತರು ನಡೆಸುವ ಸಾಧ್ಯತೆ ಇರುವುದಾಗಿ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಕೆ.ಎನ್.ರಾಜಣ್ಣ, ನಾನೂ ಕೂಡಿಕೊಂಡು ಮೈತ್ರಿ ಸರ್ಕಾರ ಪತನ ಮಾಡಿದೆವು

    ಪ್ರತ್ಯೇಕ ಎಫ್​ಐಆರ್ ದಾಖಲು: ಅಮಾನತುಗೊಂಡಿರುವ ಎಸಿಪಿ ಪ್ರಭುಶಂಕರ್ ಹಾಗೂ ಇನ್​ಸ್ಪೆಕ್ಟರ್​ಗಳಾದ ನಿರಂಜನ್ ಮತ್ತು ಅಜಯ್ ವಿರುದ್ಧ ಕಾಟನ್​ಪೇಟೆಯಲ್ಲಿ ಪ್ರತ್ಯೇಕ ಎರಡು ಎಫ್​ಐಆರ್ ಮಾಡಲಾಗಿದೆ. ಎಸಿಪಿ, ರಿಯಲ್ ಎಸ್ಟೇಟ್ ಏಜೆಂಟ್, ರೌಡಿ ಸೇರಿ ಐವರ ವಿರುದ್ಧ ಒಂದು ಪ್ರಕರಣ ಹಾಗೂ ಮತ್ತೊಂದರಲ್ಲಿ ಇನ್​ಸ್ಪೆಕ್ಟರ್​ಗಳ ವಿರುದ್ಧ ವ್ಯಾಪಾರಿಗಳಿಗೆ ಬೆದರಿಸಿ ಹಣ ಸುಲಿಗೆ ಮಾಡಿರುವ ಆರೋಪದಡಿ ಎಫ್​ಐಆರ್ ಆಗಿದೆ. ತನಿಖೆ ಮುಂದುವರಿದಿದೆ ಎಂದು ಕಾಟನ್​ಪೇಟೆ ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಕೋವಿಡ್​ನಿಂದ ತತ್ತರಿಸಿದ ವಿಶ್ವದ ಯಾವುದೇ ರಾಷ್ಟ್ರ ಇಷ್ಟು ದೊಡ್ಡ ಪ್ರಮಾಣದ ಆರ್ಥಿಕ ನೆರವು ಘೋಷಣೆ ಮಾಡಿಲ್ಲ

    ಎಸಿಬಿಗೆ ದೂರು ಏಕಿಲ್ಲ?: ಸುಲಿಗೆ ಆರೋಪ ಹೊತ್ತಿರುವ ಎಸಿಪಿ ಮತ್ತು ಇನ್​ಸ್ಪೆಕ್ಟರ್​ಗಳು ಸರ್ಕಾರಿ ಸೇವೆ ದುರುಪಯೋಗ ಪಡಿಸಿಕೊಂಡಿದ್ದಾರೆ. ಜತೆಗೆ ಕಾಳಸಂತೆಯಲ್ಲಿ ಸಿಗರೇಟ್ ವ್ಯಾಪಾರ ನಡೆಸಲು ಹಾಗೂ ಕ್ರಿಮಿನಲ್ ಪ್ರಕರಣ ದಾಖಲಾದ ಮೇಲೆ ಶಿಕ್ಷೆಯಿಂದ ಪಾರು ಮಾಡುವ ಭರವಸೆ ನೀಡಿ ಸಗಟು ವ್ಯಾಪಾರಿಗಳಿಂದ ಲಂಚ ಪಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅದಕ್ಕಾಗಿ ಭ್ರಷ್ಟಾಚಾರ ನಿಗ್ರಹ ದಳಕ್ಕೂ ಎಸಿಬಿ) ದೂರು ಕೊಡಬೇಕಿತ್ತು. ಕೇವಲ ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿ ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿವೆ ಎಂಬ ಪೊಲೀಸ್​ಇಲಾಖೆಯಲ್ಲಿ ಚರ್ಚೆಗಳು ನಡೆಯುತ್ತಿವೆ.

    ಅಪ್ಪನ ಬೆನ್ನಿಗೆ ಚೂರಿ ಇಟ್ಟ ಆ ಹುಡುಗ, “ಬೈಕ್ ಓಡಿಸು” ಅಂದ; ಮುಂದೇನಾಯಿತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts