

ಬೆಂಗಳೂರು: ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ(ಜಿಕೆವಿಕೆ) ನಡೆಯುತ್ತಿರುವ ಕೃಷಿ ಮೇಳದಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ರೈತರ ಆದಾಯವನ್ನು 2022ಕ್ಕೆ ದ್ವಿಗುಣಗೊಳಿಸಲು ಕೃಷಿ ವಿವಿ ಅಂಗಸಂಸ್ಥೆಯಾದ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ) ಮೇಳದಲ್ಲಿ ತೆರೆದಿರುವ ಬೃಹತ್ ಮಳಿಗೆಯಲ್ಲಿ ರೈತರಿಗೆ ಎಲ್ಲ ಮಾಹಿತಿ ನೀಡುತ್ತಿದೆ.
ಕೆಲಸ ಅರಸಿ ನಗರಕ್ಕೆ ವಲಸೆ ಹೋಗಿದ್ದವರು ಕರೊನಾ ನಂತರ ಊರುಗಳಿಗೆ ಬರುತ್ತಿದ್ದು, ಸ್ವಾವಲಂಬನೆ ಬದುಕು ರೂಪಿಸಿಕೊಳ್ಳುವ ಸಲುವಾಗಿ ಕೃಷಿ, ತೋಟಗಾರಿಕೆ, ಅರಣ್ಯೀಕರಣ, ಮೀನುಗಾರಿಕೆ, ಹೈನುಗಾರಿಕೆ ಮತ್ತು ಕೋಳಿಸಾಗಣೆ ಸೇರಿ ಇನ್ನಿತರ ಬಗ್ಗೆ ನೂತನ ತಂತ್ರಜ್ಞಾನ ಮೂಲಕ ಸಲಹೆಗಳನ್ನು ನೀಡುತ್ತಿದೆ. ಕೃಷಿ ಮೇಳದ 2ನೇ ದಿನವಾದ ಶುಕ್ರವಾರದಂದು 1.76 ಲಕ್ಷ ಜನರು ಬಂದಿದ್ದರು. ಆನ್ಲೈನ್ನಲ್ಲಿ 4.20 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ.