ಹಸೆಮಣೆ ಏರಬೇಕಾದವಳು ಆಸ್ಪತ್ರೆ ಸೇರಿದಳು! ಆಸ್ಪತ್ರೆಯ ಹಾಸಿಗೆಯಲ್ಲೇ ನಡೆಯಿತು ಮದುವೆ!

marriage'
Published on

ಪ್ರಯಾಗ್​ರಾಜ್​: 2006ರಲ್ಲಿ ಬಿಡುಗಡೆಗೊಂಡ ವಿವಾಹ್​ ಸಿನಿಮಾ ನಿಮಗೆ ನೆನಪಿರಬಹುದು. ಸಂಬಂಧಿಕರೊಬ್ಬರನ್ನು ಉಳಿಸಲು ಹೋಗಿ ವಧು ಬೆಂಕಿಯಿಂದ ದೇಹ ಸುಟ್ಟಿಕೊಳ್ಳುತ್ತಾಳೆ. ಆದರೆ ಮದುವೆ ಮುರಿಯದ ವರ, ಆಕೆಯನ್ನೇ ಮದುವೆಯಾಗಿ ಆದರ್ಶ ಬದುಕನ್ನು ಬದುಕುತ್ತಾನೆ. ಇಂತದ್ದೆಲ್ಲ ಬರೀ ಸಿನಿಮಾಗೆ ಸೀಮಿತ ಎಂದು ನಾವೆಂದುಕೊಳ್ಳುತ್ತೇವೆ. ಆದರೆ ನಿಜ ಜೀವನದಲ್ಲೂ ಇಂತಹ ಆದರ್ಶ ವ್ಯಕ್ತಿಗಳಿರುತ್ತಾರೆ ಎನ್ನುವುದಕ್ಕೆ ಉತ್ತರ ಪ್ರದೇಶದಲ್ಲಿ ನಡೆದ ಈ ಮದುವೆಯೇ ಸಾಕ್ಷಿ.

ಉತ್ತರ ಪ್ರದೇಶದನ ಪ್ರಯಾಗ್​ರಾಜ್​ನ ಆರತಿಗೆ ಅವಧೇಶ್​ ಹೆಸರಿನ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಡಿಸೆಂಬರ್​ 8ರ ಸಂಜೆ ವಧು ವರರಿಬ್ಬರು ಹಸೆ ಮಣೆ ಏರಬೇಕಿತ್ತು. ಮಧ್ಯಾಹ್ನದ ವೇಳೆ ಮೂರ್ನಾಲ್ಕು ಮಕ್ಕಳು ಮನೆಯ ಮೇಲಿನ ಟೆರೇಸ್​ನಲ್ಲಿ ಆಟವಾಡುತ್ತಿದ್ದರು. ಆಟವಾಡುತ್ತಿದ್ದ ಮಕ್ಕಳಲ್ಲಿ ಮೂರು ವರ್ಷದ ಮಗುವೊಂದು ಟೆರೇಸ್​ನಿಂದ ಬೀಳುವುದರಲ್ಲಿತ್ತು. ಅದನ್ನು ಕಂಡ ಆರತಿ ಓಡಿ ಬಂದು ಮಗುವನ್ನು ರಕ್ಷಿಸಿದ್ದಾಳೆ. ಘಟನೆಯಲ್ಲಿ ಆಕೆಯೇ ಟೆರೇಸ್​ನಿಂದ ಕೆಳಗೆ ಬಿದ್ದಿದ್ದು, ಆಕೆಯ ಬೆನ್ನು ಮೂಳೆ ಮುರಿದಿದೆ. ಕಾಲುಗಳೆರೆಡು ಸ್ವಾಧೀನ ಕಳೆದುಕೊಂಡಿದೆ. ತಕ್ಷಣ ಆರತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಡೆದ ವಿಚಾರವನ್ನು ವರ ಅವಧೇಶ್​ಗೆ ತಿಳಿಸಿ, ಆರತಿಯ ಬದಲು ಆಕೆಯ ತಂಗಿಯನ್ನು ಮದುವೆಯಾಗುವಂತೆ ಕೇಳಿಕೊಳ್ಳಲಾಗಿದೆ. ಆದರೆ ಅದಕ್ಕೆ ಒಪ್ಪದ ಅವಧೇಶ್​ ಆರತಿಯನ್ನೇ ಮದುವೆಯಾಗುವುದಾಗಿ ತಿಳಿಸಿದ್ದಾನೆ. ಆರತಿ ದಾಖಲಾಗಿದ್ದ ಆಸ್ಪತ್ರೆಗೆ ಬಂದು ಆಕೆಯ ಆರೈಕೆ ಮಾಡಿದ್ದಾನೆ. ಕೊನೆಗೆ ಕೆಲ ಶಾಸ್ತ್ರಗಳೊಂದಿಗೆ, ಬಂಧುಗಳ ಸಮ್ಮುಖದಲ್ಲಿ ಆಸ್ಪತ್ರೆಯಲ್ಲೇ ಮದುವೆಯನ್ನೂ ಮಾಡಲಾಗಿದೆ. ಹಾಸಿಗೆ ಮೇಲಿದ್ದ ಆರತಿಗೆ ತಾಳಿ ಕಟ್ಟಿರುವ ಅವಧೇಶ್​ ಆಕೆಯನ್ನು ತನ್ನ ಮಗುವಿನಂತೆ ಆರೈಕೆ ಮಾಡಲಾರಂಭಿಸಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net