ಮದ್ವೆಯಾಗಿ ಒಂದೂವರೆ ತಿಂಗಳಲ್ಲೇ ಹೆಣವಾದ ಯುವಕ! ಪೊಲೀಸರ ನಿರ್ಲಕ್ಷ್ಯದಿಂದಲೇ ನಡೆಯಿತು ಭೀಕರ ಹತ್ಯೆ

murder
Published on

ಚಂಡೀಗಢ: ಪ್ರೀತಿಗೆ ಜಾತಿಯ ಬೇಲಿಯಿಲ್ಲ, ಆದರೆ ಕುಟುಂಗಳಿಗಿದೆಯಲ್ಲವೇ? ಅದೇ ರೀತಿ ಬೇರೆ ಜಾತಿಯ ಯುವಕನೊಬ್ಬನನ್ನು ಪ್ರೀತಿಸಿ ಮದುವೆಯಾದ ಯುವತಿಯೊಬ್ಬಳು, ಕೇವಲ ಒಂದೂವರೆ ತಿಂಗಳಲ್ಲಿ ವಿಧವೆಯಾಗಿರುವ ಘಟನೆ ಹರಿಯಾಣದ ಪಾಣಿಪತ್​ನಲ್ಲಿ ನಡೆದಿದೆ. ಮೂರೇ ದಿನಗಳಲ್ಲಿ ಮರ್ಯಾದಾ ಹತ್ಯೆಯ ಎರಡನೇ ಪ್ರಕರಣದ ದಾಖಲಾಗಿದೆ.

ನೀರಜ್​ (23) ಹೆಸರಿನ ಯುವಕ ಬೇರೆ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರದಲ್ಲಿ ಮೊದಲಿಗೆ ಕುಟುಂಬಗಳಿಗೆ ಒಪ್ಪಿಗೆ ಇರಲಿಲ್ಲ. ಅದಾದ ನಂತರ ಕುಟುಂಬಗಳು ಒಪ್ಪಿದ್ದು, ಅವರಿಬ್ಬರು ಮದುವೆಯಾಗಿದ್ದಾರೆ. ಮದುವೆಗೆ ಒಪ್ಪಿರುವುದಾಗಿ ಎರಡೂ ಕುಟುಂಬಗಳು ಪಂಚಾಯಿತಿಗೆ ಪತ್ರ ಬರೆದುಕೊಟ್ಟಿವೆ. ಆದರೆ ಈ ಮದುವೆ ಯುವತಿಯ ಅಣ್ಣಂದಿರಿಗೆ ಚೂರೂ ಇಷ್ಟವಿರಲಿಲ್ಲವಂತೆ.

ಶುಕ್ರವಾರದಂದು ಸಂಜೆ ಯುವತಿಯ ಅಣ್ಣಂದಿರು ನೀರಜ್​ನ ಮೇಲೆ ಹಲ್ಲೆ ನಡೆಸಿದ್ದು, ಅವನಿಗೆ ಕನಿಷ್ಠ 12 ಬಾರಿ ಚಾಕುವಿನಿಂದ ಚುಚ್ಚಿದ್ದಾರೆ. ನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ಆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮದುವೆಯಾದಾಗಿನಿಂದಲೂ ನೀರಜ್​ಗೆ ಬೆದರಿಕೆ ಕರೆಗಳು ಬರುತ್ತಿದ್ದವಂತೆ. ನಿನ್ನನ್ನು ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಲಾಗುತ್ತಿತ್ತಂತೆ. ಹಾಗೆಯೇ ಯುವತಿಗೂ ಕರೆ ಮಾಡುತ್ತಿದ್ದ ಅಣ್ಣಂದಿರು ನಿನಗೆ ಕಣ್ಣೀರು ತರಿಸುತ್ತೇವೆ ಎಂದು ಬೆದರಿಸುತ್ತಿದ್ದರಂತೆ. ಈ ವಿಚಾರವಾಗಿ ನವದಂಪತಿ ಪೊಲೀಸ್​ ರಕ್ಷಣೆಯನ್ನೂ ಕೋರಿದ್ದರಂತೆ. ಆದರೆ ಅದನ್ನು ನಿರ್ಲಕ್ಷಿಸಿದ್ದ ಪೊಲೀಸರು ದಂಪತಿಗೆ ರಕ್ಷಣೆ ನೀಡಿಲ್ಲ.

ನೀರಜ್​ನ ಕೊಲೆ ಮಾಡಿರುವ ಆರೋಪಿಗಳು ಮತ್ತೆ ಕರೆ ಮಾಡ, ಇನ್ನಷ್ಟು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀರಜ್​ನ ಅಣ್ಣ ದೂರಿದ್ದಾರೆ. ಈ ವಿಚಾರವಾಗಿ ಪೊಲೀಸ್​ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net