ಚುನಾವಣೆಯಲ್ಲಿ ಗೆದ್ದರೂ ಹೆಂಡತಿಯನ್ನೇ ಕಳೆದುಕೊಂಡ ಅಭ್ಯರ್ಥಿ; ಗಂಡನ ಮೇಲಿನ ಸಿಟ್ಟಿಗೆ ಹೀಗಾ ಮಾಡೋದು?!

Suicide
Published on

ಬಣಕಲ್ (ಮೂಡಿಗೆರೆ): ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು, ಚುನಾವಣೆಯಲ್ಲಿ ಗೆಲುವು ಕಂಡಿದ್ದರೂ ಹೆಂಡತಿಯನ್ನು ಕಾಣದಂತಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಎಂದರೂ ಪತಿ ಕರೆದೊಯ್ಯದ್ದಕ್ಕೆ ಸಿಟ್ಟಾದ ಪತ್ನಿ ಕೈಗೊಂಡ ನಿರ್ಧಾರ ಈಗ ಗೆದ್ದ ಅಭ್ಯರ್ಥಿ ಪಶ್ಚಾತ್ತಾಪ ಪಡುವಂತೆ ಮಾಡಿದೆ.

ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದ ಪತಿಯು ಮತ ಎಣಿಕೆ ಕೇಂದ್ರಕ್ಕೆ ಕರೆದೊಯ್ದಿಲ್ಲ ಎಂಬ ಕಾರಣಕ್ಕೆ ಪತ್ನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಟದೂರಿನ ಸುನಿತಾ (42) ಆತ್ಮಹತ್ಯೆ ಮಾಡಿಕೊಂಡವರು. ಸುನಿತಾ ಅವರ ಪತಿ ತ್ರಿಪುರ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ಕೇಂದ್ರಕ್ಕೆ ಬರುತ್ತೇನೆಂದು ಸುನಿತಾ ಹಠ ಮಾಡಿದ್ದಳು. ಆದರೆ ಪತಿ ಕರೆದುಕೊಂಡು ಹೋಗಿರಲಿಲ್ಲ. ಈ ಕಾರಣಕ್ಕೆ ಬಹಳ ನೊಂದುಕೊಂಡಿದ್ದರು.

ಶುಕ್ರವಾರ ರಾತ್ರಿ 10 ಗಂಟೆ ವೇಳೆಗೆ ಸುನಿತಾ ಮನೆಯಿಂದ ಕಾಣೆಯಾಗಿದ್ದಳು. ಮನೆಯವರು ಹುಡುಕಾಟ ನಡೆಸಿದಾಗ ಶನಿವಾರ ಬೆಳಗ್ಗೆ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಬಣಕಲ್ ಪಿಎಸ್‌ಐ ಶ್ರೀನಾಥ್ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು. ಆಕೆಯ ಪುತ್ರ ಬಣಕಲ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net