

ಮುಂಬೈ: ನಗರದ ಅಕ್ಷ ಬೀಚ್ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯ ಮೃತ ದೇಹ ಸಿಕ್ಕಿದ್ದ ಪ್ರಕರಣವನ್ನು ಮುಂಬೈ ಪೊಲೀಸರು ಇದೀಗ ಬೇಧಿಸಿದ್ದಾರೆ. ತನಿಖೆ ನಡೆಸಿದಾಗ ಮಹಿಳೆಯ ಮಾವನ ನಿಜ ರೂಪ ಬಯಲಾಗಿದೆ.
ನಂದಿನಿ ಮತ್ತು ಪಂಕಜ್ ಪ್ರೀತಿಸಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಈ ಮದುವೆ ಪಂಕಜ್ನ ಅಪ್ಪ ಕಮಲ್ ರೈ (55)ಗೆ ಇಷ್ಟವಿರಲಿಲ್ಲವಂತೆ. ಮದುವೆ ತಡೆಯಲು ಸಾಕಷ್ಟು ಪ್ರಯತ್ನವನ್ನು ಆತ ಮಾಡಿದ್ದನಂತೆ. ಮದುವೆಯಾದ ಮೇಲೂ ಸೊಸೆಯನ್ನು ಯಾವಾಗಲೂ ಅನುಮಾನದಿಂದಲೇ ನೋಡುತ್ತಿದ್ದನಂತೆ. ಡಿಸೆಂಬರ್ 9ರಂದು ಮಗ ಹೊರಗಡೆ ಕೆಲಸಕ್ಕೆ ಹೋದಾಗ ಸೊಸೆ ರೂಮಿನಲ್ಲಿ ಮಲಗಿದ್ದಳು. ಆ ಸಮಯದಲ್ಲಿ ಮನೆಗೆ ಇಬ್ಬರು ಸ್ನೇಹಿತರನ್ನು ಕರೆಸಿಕೊಂಡ ಕಮಲ್, ಸೊಸೆಯ ರೂಮಿಗೆ ತೆರಳಿ ಆಕೆಯ ಕೈ ಕಟ್ಟಿ, ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ನಂತರ ಆಕೆಯ ಮೃತ ದೇಹವನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿ ಕಟ್ಟಿ ಪ್ಯಾಕ್ ಮಾಡಿ ಮನೆ ಹತ್ತಿರದ ನಾಲೆಯಲ್ಲಿ ಬಿಸಾಕಿದ್ದಾರೆ.
ಡಿಸೆಂಬರ್ 9ರಂದು ನಾಲೆ ಸೇರಿದ್ದ ಶವ ಡಿಸೆಂಬರ್ 24ರಂದು ಅಕ್ಷ ಬೀಚ್ ತಲುಪಿದೆ. ಬೀಚ್ನ ದಡದಲ್ಲಿದ್ದ ಚೀಲದಲ್ಲಿ ಶವವಿರುವುದನ್ನು ಗುರುತಿಸಿದ ದಾರಿಹೋಕನೊಬ್ಬ ಈ ವಿಚಾರವನ್ನು ಪೊಲೀಸರಿಗೆ ಮುಟ್ಟಿಸಿದ್ದ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಕಂಡುಹಿಡಿದಿದ್ದಾರೆ. ಇದೀಗ ಕಮಲ್ ರೈ ಮತ್ತು ಆತನಿಗೆ ಸಹಾಯ ಮಾಡಿದ್ದ ಇಬ್ಬರು ಸ್ನೇಹಿತರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. (ಏಜೆನ್ಸೀಸ್)