ಕ್ಷೇತ್ರಪತಿ ಚಿತ್ರದ ವಿಮರ್ಶೆ ; ಅನ್ನದಾತನ ಆಕ್ರಂದನ, ಆಕ್ರೋಶಗಳ ಸುತ್ತ...

Kshetrapathi (2)
Published on

| ಹರ್ಷವರ್ಧನ್​ ಬ್ಯಾಡನೂರು

ಚಿತ್ರ: ಕ್ಷೇತ್ರಪತಿ
ನಿರ್ದೇಶನ: ಶ್ರೀಕಾಂತ್​ ಕಟಗಿ
ನಿರ್ಮಾಣ: ವಿವೇಕ್​ ಶ್ರೀಕಂಠಯ್ಯ ಮತ್ತು ರಾಹುಲ್​ ಗುಡಿ
ತಾರಾಗಣ: ನವೀನ್​ ಶಂಕರ್​, ಅರ್ಚನಾ ಜೋಯಿಸ್​, ನಾಟ್ಯರಂಗ, ಅಚ್ಯುತ್​ ಕುಮಾರ್​, ರಾಹುಲ್​ ಐನಾಪುರ್​, ಹರ್ಷ್​ ಅರ್ಜುನ್​, ಕೃಷ್ಣ ಹೆಬ್ಬಾಳೆ ಮುಂತಾದವರು.

ಎರಡು ವಿಷಯಗಳಲ್ಲಿ "ಕ್ಷೇತ್ರಪತಿ' ವಿಭಿನ್ನವಾಗಿ ನಿಲ್ಲುತ್ತದೆ. ಒಂದು ರೈತರ ಕಷ್ಟಗಳ ಸುತ್ತ ಕಮರ್ಷಿಯಲ್​ ಸಿನಿಮಾ ಬಂದಿರುವುದು ಅಪರೂಪ. ಮತ್ತೊಂದು, ಉತ್ತರ ಕರ್ನಾಟಕದ ಜನರ ಜೀವನಶೈಲಿ, ಜವಾರಿ ಭಾಷೆಯ ಸಿನಿಮಾಗಳು ಬಂದಿರುವುದು ಅತಿ ಅಪರೂಪ. ಆ ಎರಡೂ ಕೊರತೆಗಳನ್ನು ಈ ಚಿತ್ರ ನೀಗಿಸಿದೆ.

"ನಮ್​ ದೇಶದಲ್ಲಿ ಪೆಟ್ರೋಲ್​, ಮೊಬೈಲ್​ಗಿಂತ ಅತಿ ಮುಖ್ಯವಾಗಿ ಬೇಕಿರೋದು ಅನ್ನ. ಅದನ್ನ ನಮ್ಮ ರೈತರು ಬೆವರು ಸುರಿಸಿ ಬೆಳೀಬೇಕೋ, ಕಣ್ಣೀರು ಸುರಿಸಿ ಬೆಳೀಬೇಕೋ, ನೀವೇ ನಿರ್ಧಾರ ಮಾಡಿ' ಎನ್ನುತ್ತಾರೆ ಬಸವ ಅಲಿಯಾಸ್​ ಬಸವರಾಜ್​ ಹಾದಿಮನಿ (ನವೀನ್​ ಶಂಕರ್​). "ಕ್ಷೇತ್ರಪತಿ' ಚಿತ್ರ ಕೂಡ ರೈತರ ಬೆವರು ಮತ್ತು ಕಣ್ಣೀರ ಸುತ್ತ ಸುತ್ತುವ ಕಥೆ.

ಮೂಲತಃ ಉತ್ತರ ಕರ್ನಾಟಕದ ಬಸವ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್​ ಓದುತ್ತಿರುತ್ತಾನೆ. ಅಪ್ಪನ ಆತ್ಮಹತ್ಯೆ ವಿಷಯ ತಿಳಿದು ಊರಿಗೆ ಹೋಗುತ್ತಾನೆ. ಕೃಷಿಗೆ ಸಾಲ ಮಾಡಿ ಬೆಳೆ ಬೆಳೆದು, ಸರಿಯಾದ ಬೆಲೆ ದೊರೆಯದೇ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಅಪ್ಪ ಮೊದಲಿಗನೂ ಅಲ್ಲ, ಕೊನೆಯವನೂ ಅಲ್ಲ ಎಂಬುದು ತಿಳಿಯುತ್ತದೆ. ಆದರೆ, ನಾನೂ ಒಕ್ಕಲುತನ ಮಾಡುತ್ತೇನೆಂದು ಅರ್ಧಕ್ಕೇ ಓದು ನಿಲ್ಲಿಸಿ, ಊರಲ್ಲಿ ನೆಲೆಯೂರುತ್ತಾನೆ. ಮುಂದೆ? ರೈತರ ಹೊಲ&ಗದ್ದೆ ಮೇಲೆ ಹೊಂಚು ಹಾಕುವ ದುಷ್ಟರ ಕೂಟ, ಹಳ್ಳಿ ರಾಜಕೀಯದ ಮೇಲಾಟ, ಕಾರ್ಪೊರೇಟ್​ ಕಂಪನಿಗಳ ಕಳ್ಳಾಟ, ಎಲ್ಲರ ವಿರುದ್ಧ ಬಸವನ ಹೋರಾಟ…

ಚಿತ್ರದಿಂದ ಚಿತ್ರಕ್ಕೆ, ಪಾತ್ರದಿಂದ ಪಾತ್ರಕ್ಕೆ ನಟ ನವೀನ್​ ಶಂಕರ್​ ಮತ್ತಷ್ಟು ಪಕ್ವವಾಗುತ್ತಿದ್ದಾರೆ. ಜವಾರಿ ಹುಡುಗ ಬಸವನ ಪಾತ್ರಕ್ಕೆ ಹೇಳಿ ಮಾಡಿಸಿದಂತಿರುವ ನವೀನ್​ ೈಟ್ಸ್​ ಮತ್ತು ಆ್ಯಂಬುಲೆನ್ಸ್​ ಸನ್ನಿವೇಶಗಳಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಅವರಿಗೆ ಜೋಡಿಯಾಗಿ ಭೂಮಿಕಾ ಪಾತ್ರದಲ್ಲಿ ಅರ್ಚನಾ ಜೋಯಿಸ್​ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ನಾಟ್ಯರಂಗ ಅಲ್ಲಲ್ಲಿ ನಗಿಸುತ್ತಾರೆ. ಅಚ್ಯುತ್​ ಕುಮಾರ್​, ಹರ್ಷ್​ ಅರ್ಜುನ್​, ರಾಹುಲ್​ ಐನಾಪುರ್​ ಗಮನ ಸೆಳೆಯುತ್ತಾರೆ. ರವಿ ಬಸ್ರೂರ್​ ನಿರ್ದೇಶನದಲ್ಲಿ ಹಾಡುಗಳು, ಹಿನ್ನೆಲೆ ಸಂಗೀತ, ಶಿವಸಾಗರ್​ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಮೊದಲ ಪ್ರಯತ್ನದಲ್ಲಿಯೇ ನಿರ್ದೇಶಕ ಶ್ರೀಕಾಂತ್​ ಕಟಗಿ ರೈತರ ಸಮಸ್ಯೆಗಳಿಗೆ ಸಿನಿಮಾ ರೂಪ ನೀಡಿರುವುದಲ್ಲದೇ, ತಮ್ಮದೇ ರೀತಿಯಲ್ಲಿ ಪರಿಹಾರ ಹೇಳುವ ಪ್ರಯತ್ನ ಮಾಡಿರುವುದು ಶ್ಲಾನೀಯ. ಒಂದೊಳ್ಳೆ ಕಂಟೆಂಟ್​ ಸಿನಿಮಾ ನೋಡಲು ಇಚ್ಛಿಸುವವರಿಗೆ "ಕ್ಷೇತ್ರಪತಿ' ಉತ್ತಮ ಆಯ್ಕೆ.
ಸ್ಟಾರ್​: 3.5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net