

ನವದೆಹಲಿ: ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ತಿಂಗಳುಗಳು ಬಾಕಿ ಇದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಮುಂದಿನ ಬಾರಿ ಯಾರು ಕೇಂದ್ರದಲ್ಲಿ ಅಧಿಕಾರದ ಗದ್ದುಗೆಯನ್ನು ಏರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಈಗಾಗಲೇ ಒಂದೊಂದೆ ಸಮೀಕ್ಷೆಗಳು ಬೆಳಕಿಗೆ ಬರುತ್ತಿವೆ. ಇದೀಗ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಪ್ರಕಟವಾಗಿದ್ದು, ಮತ್ತೊಮ್ಮೆ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಒಕ್ಕೂಟ ಅಧಿಕಾರದ ಗದ್ದುಗೆ ಏರಲಿದೆ. ಆದರೆ, ಮೋದಿ ಹೇಳಿದ 400ರ ಗಡಿ ಮುಟ್ಟುವಲ್ಲಿ ಎನ್ಡಿಎ ಎಡವಲಿದೆ.
ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಪ್ರಕಾರ ಇಂದು ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ ಅಧಿಕಾರ ರಚಿಲು ಬೇಕಿರುವ 272 ಬಹಮತ ಸಂಖ್ಯೆಯನ್ನು ದಾಟಿ 335 ಸ್ಥಾನಗಳ ಭರ್ಜರಿ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ. 335 ಸ್ಥಾನಗಳ ಪೈಕಿ ಬಿಜೆಪಿ 304 ಸ್ಥಾನಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದ್ದು, ಸ್ವತಂತ್ರವಾಗಿ ಸರಳ ಬಹುಮತವನ್ನು ಗಳಿಸುವ ಸಾಮರ್ಥ್ಯವನ್ನು ದೃಢಪಡಿಸಿದೆ.
2024, ಫೆಬ್ರವರಿ ತಿಂಗಳ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ಎಲ್ಲ ಲೋಕಸಭಾ ಸ್ಥಾನಗಳಲ್ಲಿ 35,801 ಜನರ ಪ್ರತಿಕ್ರಿಯೆಗಳನ್ನು ಆಧರಿಸಿದೆ. ಈ ಸಮೀಕ್ಷೆಯನ್ನು 2023, ಡಿಸೆಂಬರ್ 15 ಮತ್ತು 2024, ಜನವರಿ 28 ನಡುವೆ ನಡೆಸಲಾಗಿದೆ. ಕಾಂಗ್ರೆಸ್ ಒಳಗೊಂಡಿರುವ ಇಂಡಿಯಾ ವಿಪಕ್ಷ ಒಕ್ಕೂಟವು 166 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. NDA ಒಕ್ಕೂಟದ ಭದ್ರಕೋಟೆಗೆ ಸವಾಲು ಒಡ್ಡುವಲ್ಲಿ ಇಂಡಿಯಾ ಒಕ್ಕೂಟ ವಿಫಲವಾಗಿದೆ.
ಅಂದಹಾಗೆ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯನ್ನು ದೇಶದ ಎಲ್ಲ ಸಂಸದೀಯ ಕ್ಷೇತ್ರಗಳಾದ್ಯಂತ ಸಂದರ್ಶನಗಳ ಮೂಲಕ ಸೂಕ್ಷ್ಮವಾಗಿ ನಡೆಸಲ್ಪಟ್ಟಿದೆ. ಬಿಜೆಪಿಯ ಕಲ್ಯಾಣ ಯೋಜನೆಗಳು ಮತ್ತು ರಾಷ್ಟ್ರೀಯತೆಯನ್ನು ಪ್ರಸ್ತುತ ಪಡಿಸುವ ರೀತಿ ಜನಸಮೂಹಕ್ಕೆ ಇಷ್ಟವಾಗಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರಿಗೆ ಸರಿಸಾಟಿಯಾಗಬಲ್ಲ ಪರ್ಯಾಯ ನಾಯಕತ್ವವನ್ನು ಪ್ರಸ್ತುತಪಡಿಸಲು ವಿಪಕ್ಷಗಳ ಪದೇಪದೆ ಎಡವುತ್ತಿರುವುದು ನಿರ್ಣಾಯಕ ಅಡಚಣೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿ ಹುದ್ದೆಗೇರಲು ಸಜ್ಜಾಗುತ್ತಿರುವ ಸಮಯದಲ್ಲಿ ಜಾಗತಿಕವಾಗಿ ಅವರ ಪ್ರಭಾವವು ಗಮನಾರ್ಹವಾಗಿ ಹೆಚ್ಚಾಗಿದೆ. ಇತ್ತೀಚೆಗಷ್ಟೇ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡುವಾಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ 400 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದರು. (ಏಜೆನ್ಸೀಸ್)