

ಬೆಂಗಳೂರು: ಕನ್ನಡದ ಪ್ರಪ್ರಥಮ ನಂದಿ ಫಿಲ್ಮ್ ಅವಾರ್ಡ್ ಆರಂಭವಾಗಿದ್ದು, ನಟ-ನಿರ್ದೇಶಕ ಕಿಚ್ಚ ಸುದೀಪ್ ಚಾಲನೆ ನೀಡಿದ್ದಾರೆ. ಡಿ.6ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ನಂದಿ ಫಿಲ್ಮ್ ಅವಾರ್ಡ್-2023ರ ಕರ್ಟನ್ ರೈಸರ್ ಸುದೀಪ್ ಅವರಿಂದ ನಡೆದಿದೆ.
ಈ ಸಂದರ್ಭದಲ್ಲಿ ಆಯೋಜಕರಿಗೆ ಶುಭ ಹಾರೈಸಿದ ಕಿಚ್ಚ ಸುದೀಪ್, ಸಂಸ್ಥಾಪಕರಿಗೆ ಒಳ್ಳೆಯದಾಗಲಿ ಎಂದು ಪ್ರಶಸ್ತಿಗಳ ಕುರಿತು ಮಾತನಾಡಿದರು. ನಾನು ಅವಾರ್ಡ್ಸ್ ಕಾರ್ಯಕ್ರಮಕ್ಕೆ ಹೋಗಿದ್ದು 2003-2004 ಕೊನೆಯದ್ದು, ಆ ಬಳಿಕ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಹೋಗಲಿಲ್ಲ ಎನ್ನುತ್ತ ಅದಕ್ಕೊಂದು ಇತಿಹಾಸ ಇದೆ ಎಂದರು.
ಇಲ್ಲಿ ಆ ಅವಾರ್ಡ್ಸ್ ಮಹತ್ವ ಬೇರೆ ಕಲಾವಿದರಿಗೆ ಆಗಲಿ. ಪ್ರಶಸ್ತಿ ಎಲ್ಲರಿಗೂ ಎಷ್ಟು ಮುಖ್ಯ ಎನ್ನುವುದನ್ನು ನೋಡಿದ್ದೇನೆ. ನನ್ನ ಮನವಿ ಏನೆಂದರೆ ಯಾರಿಗೆ ಹೋಗಬೇಕು ಅವರಿಗೆ ಹೋಗಲಿ, ಮಿಕ್ಕಿದವರೆಲ್ಲ ದುಡ್ಡು ಮಾಡುತ್ತಿದ್ದಾರೆ. ಅವಾರ್ಡ್-ದುಡ್ಡು ಅಂತ ನೋಡಿದಾಗ ಪ್ರಶಸ್ತಿ ಬಿಟ್ಟು ದುಡ್ಡಿಗೆ ಕೈ ಹಾಕುವವರು ಇದ್ದಾರೆ. ಪ್ರಶಸ್ತಿಗೆ ಗೌರವ ಕೊಟ್ಟು ಅದಕ್ಕಾಗಿ ಬಾಳಿ ಬದುಕುವವರಿಗೆ ಅವರಿಗೆ ನೀಡಿ ಎಂದು ಸುದೀಪ್ ಹೇಳಿದರು.
ನಂದಿ ಬಹಳ ಶ್ರೇಷ್ಠ. ಅದರ ಹೆಸರಲ್ಲಿ ನಡೆಸುತ್ತೀರಿ ಎಂದರೆ ಅಷ್ಟೇ ಶುದ್ಧವಾಗಿ ಇರಲಿ. ಕರ್ನಾಟಕದಲ್ಲಿ ಅವಾರ್ಡ್ಸ್ ಪ್ರೋಗ್ರಾಂ ನಡೆಸಲು ಬಹಳ ಕೊರತೆ ಇದೆ. ತಲೆ ಎತ್ತಿ ನೋಡುವ ಅವಾರ್ಡ್ಸ್ ಪ್ರೋಗ್ರಾಂ ಇಲ್ಲ. ಅಂತಹ ಪ್ರಶಸ್ತಿ ಕಾರ್ಯಕ್ರಮ ನಂದಿ ಆಗಲಿ ಎಂದು ಶುಭ ಹಾರೈಸಿದರು.
ನೆರೆಯ ಆಂಧ್ರಪ್ರದೇಶ ಮನರಂಜನಾ ಕ್ಷೇತ್ರದ ಸಾಧಕರಿಗೆ ಕೊಡುವ ರಾಜ್ಯ ಪ್ರಶಸ್ತಿಗೂ ನಂದಿ ಅವಾರ್ಡ್ಸ್ ಎಂದೇ ಹೆಸರಿದೆ. ಆದರೆ, ಆ ಪ್ರಶಸ್ತಿಗೂ ಈ ಪ್ರಶಸ್ತಿಗೂ ಸಂಬಂಧವಿಲ್ಲ. ಎರಡೂ ಬೇರೆ ಬೇರೆ. ಆಂಧ್ರಪ್ರದೇಶದಂತೆ ಕನ್ನಡದ ಪ್ರಶಸ್ತಿಗೂ ನಂದಿ ಅವಾರ್ಡ್ ಎಂದೇ ಕರೆಯಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ನಂದಿ ಎನ್ನುವುದು ಕನ್ನಡದ ಪಾಲಿಗೂ ಒಂದು ಪವರ್‌ಫುಲ್ ಇಮೇಜ್ ಎನಿಸುವ ಲಾಂಛನ. ಆ ಕಾರಣದಿಂದಲೇ 'ನಂದಿ' ಎಂಬ ಹೆಸರನ್ನೇ ಕನ್ನಡದ ಪ್ರಶಸ್ತಿಗೂ ಇಡಲಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ 'ನಂದಿ ಫಿಲ್ಮಂ ಅವಾರ್ಡ್' ಸಂಸ್ಥಾಪಕರಾಗಿದ್ದಾರೆ. ಭಾ.ಮಾ.ಗಿರೀಶ್, ಹರ್ಷಿತಾ, ನಂದಿತಾ ಹಾಗೂ ಅಶೋಕ್ ನಿರ್ದೇಶಕರಾಗಿದ್ದಾರೆ.
ನಂದಿ ಪ್ರಶಸ್ತಿಯಲ್ಲಿ ಕನ್ನಡ ಸಿನಿಮಾಗಳು, ಪ್ರಾದೇಶಿಕವಾಗಿ ಭಾಷೆಗಳಾದ ತುಳು, ಕೊಡವ, ಕೊಂಕಣಿ, ಬ್ಯಾರಿ ಹಾಗೂ ಬಂಜಾರ ಈ ಭಾಷೆಗಳಿಗೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಸಾಹಿತ್ಯ, ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಗೂ ಪ್ರಶಸ್ತಿ ನೀಡಲಾಗುತ್ತದೆ. 50ಕ್ಕೂ ಹೆಚ್ಚು ವಿಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ' ಎಂದು ಮಾಹಿತಿ ನೀಡಿದರು.
ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದ ಸ್ವಂತ ಪ್ರಶಸ್ತಿ ನೀಡುವ ವೇದಿಕೆ, ಆ ಮೂಲಕ ಕನ್ನಡದ ಪ್ರತಿಭೆಗಳನ್ನು ನಾವೇ ಗುರುತಿಸಿ ಬೆನ್ನು ತಟ್ಟುವ ಪ್ರಯತ್ನ ಮಾಡಬೇಕಿದ್ದು, ನಂದಿ ಅವಾರ್ಡ್ ಘೋಷಣೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ಡಿ.6ರಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಭಾಗಿಯಾಗಲಿದ್ದಾರೆ.