ಹೈದರಾಬಾದ್: ಮಾಜಿ ಮಿಸ್ ಇಂಡಿಯಾ, ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಅವರು ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಂಡು ಜೊತೆಗೆ ಅವುಗಳನ್ನು ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ. ಅವರ ಬಾಲ್ಯದ ಫೋಟೋಗಳಿಂದ ಹಿಡಿದು ಮಿಸ್ ಇಂಡಿಯಾ ಆಗಿ ಅದ್ಭುತವಾದ ಕಿರೀಟವನ್ನು ಅಲಂಕರಿಸುವ ಕ್ಷಣ, ಸಿನಿಮಾಗಳಲ್ಲಿ ತಮ್ಮ ವೃತ್ತಿಜೀವನ ಮತ್ತು ನಟ ಮಹೇಶ್ ಬಾಬು ಅವರ ಜತೆಗೆ ತಮ್ಮ ಮದುವೆಯ ಕ್ಷಣಗಳವರೆಗೆ ಎಲ್ಲವನ್ನೂ ನೆನಪಿಸಿಕೊಂಡರು. ಇನ್ನು, ಈ ಎಲ್ಲಾ ಸುಂದರ ಕ್ಷಣಗಳನ್ನು ಒಂದು ವಿಡಿಯೋದಲ್ಲಿ ಜೋಡಿಸಿ ಶೇರ್ ಮಾಡಿಕೊಂಡಿದ್ದಾರೆ ನಟಿ ನಮ್ರತಾ. ಆ ವಿಡಿಯೋಗೆ ನಮ್ರತಾ, “ಇಲ್ಲಿಯವರೆಗಿನ ನನ್ನ ಜೀವನ ಪ್ರಯಾಣವನ್ನು ಒಮ್ಮೆ ನೋಡಿ! ತುಂಬಾ ಸಂತೋಷವಾಗಿದೆ... ಇನ್ನೂ ಬೆಳೆಯುವ ಪ್ರಯತ್ನದಲ್ಲಿದ್ದೀನಿ ಮತ್ತು ಭವಿಷ್ಯವು ಹೇಗಿರಲಿದೆ, ಏನಾಗುತ್ತದೆ ಎಂಬುದನ್ನು ನೋಡಲು ಉತ್ಸುಕಳಾಗಿದ್ದೇನೆ” ಎಂಬ ಕ್ಯಾಪ್ಷನ್ ನೀಡಿದ್ದಾರೆ.