ಇದು ಆಧುನಿಕ ರಾಮಾಚಾರಿಯ ಕಥೆ!

Nadugallu - Final
Published on

ಕನ್ನಡ ಚಿತ್ರರಂಗದ ಎವರ್​ಗ್ರೀನ್​ ಸಿನಿಮಾಗಳ ಪೈಕಿ, ಪುಟ್ಟಣ್ಣ ಕಣಗಾಲ್​ ನಿರ್ದೇಶನದ 'ನಾಗರಹಾವು' ಚಿತ್ರ ಸಹ ಒಂದು. ಈ ಚಿತ್ರದಲ್ಲಿ ರಾಮಾಚಾರಿ ಮತ್ತು ಚಾಮಯ್ಯ ಮೇಷ್ಟ್ರು ಪಾತ್ರಗಳು ಕನ್ನಡಿಗರ ಮನಸ್ಸಿನಲ್ಲಿ ಅಜರಾಮರವಾಗಿ ಉಳಿದುಬಿಟ್ಟಿವೆ.

ಈಗ್ಯಾಕೆ ರಾಮಾಚಾರಿ ಮತ್ತು ಚಾಮಯ್ಯ ಮೇಷ್ಟ್ರು ಪಾತ್ರಗಳ ಪ್ರಸ್ತಾಪ ಎಂದರೆ ಅದಕ್ಕೂ ಕಾರಣವಿದೆ. 'ನಡುಗಲ್ಲು' ಎಂಬ ಹೆಸರಿನ ಮಕ್ಕಳ ಚಿತ್ರವಾಗಿದ್ದು, ಅದರಲ್ಲೂ ಚಾಮಯ್ಯ ಮೇಷ್ಟ್ರು ಮತ್ತು ರಾಮಾಚಾರಿಯನ್ನು ಹೋಲುವು ಗುರು-ಶಿಷ್ಯರ ಪಾತ್ರಗಳಿವೆ. ಆ ಗುರು-ಶಿಷ್ಯ ಹೆಜ್ಜೆಹೆಜ್ಜೆಗೂ ಹೇಗೆ ಸವಾಲುಗಳನ್ನು ಸ್ವೀಕರಿಸುತ್ತಾರೆ ಎಂಬ ವಿಷಯವನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ.

ನಡುಗಲ್ಲು ಎಂಬ ಊರಿನ ಸರ್ಕಾರಿ ಶಾಲೆಯಲ್ಲಿ ಗುರು-ಶಿಷ್ಯನ ನಡುವೆ ನಡೆಯುವ ಘಟನೆಗಳು ಮತ್ತು ಸವಾಲುಗಳ ಸುತ್ತ ಈ ಚಿತ್ರ ಸುತ್ತುತ್ತದೆ, ಗುರು-ಶಿಷ್ಯನ ಈ ಸವಾಲ್​ನಲ್ಲಿ ಯಾರು ಯಾರಿಗೆ ಸೋಲೊಪ್ಪುತ್ತಾರೆ ಎಂಬುದು ಚಿತ್ರ ಕಥಾ ಸಾರಾಂಶ.

ಈ ಹಿಂದೆ ಯೋಗಿ ಅಭಿನಯದ 'ಬಂಗಾರಿ', 'ಬೆಟ್ಟದ ದಾರಿ', 'ಶಿವನಪಾದ' ಮತ್ತು ತಮಿಳಿನ 'ಕಾದಲ್ ಪೈತ್ಯಂ' 'ಶಿವನಪಾದ' ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಮಾ ಚಂದ್ರು ಈ ಚಿತ್ರವನ್ನು ನಿರ್ದೇಶಸಿಸಿದ್ದಾರೆ. ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ. ಇನ್ನು ಪೂರ್ವಿಕಾಮೃತ ಕ್ರಿಯೇಷನ್ ಲಾಂಛನದಲ್ಲಿ ಹರಿಹರನ್ ಬಿ ಪಿ ಈ ಚಿತ್ರ ನಿರ್ಮಿಸಿದ್ದಾರೆ.

ಈಗಾಗಲೇ ಈ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದೆ. ಒಟ್ಟು 24 ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ, ಸುಳ್ಯ ತಾಲ್ಲೂಕಿನ ನಡುಗಲ್ಲು ಗ್ರಾಮದಲ್ಲಿ ಚಿತ್ರೀಕರಣವಾಗಿದ್ದು, ಇದೀಗ ಪೋಸ್ಟ್​-ಪ್ರೊಡಕ್ಷನ್​ ಹಂತದಲ್ಲಿದೆ. ಮೇಷ್ಟ್ರು ಪಾತ್ರದಲ್ಲಿ ಬಲ ರಾಜವಾಡಿ, ಶಿಷ್ಯನಾಗಿ ನಿಶಾಂತ್ ಟಿ ರಾಠೋಠ್ ಕಾಣಿಸಿಕೊಂಡಿದ್ದಾರೆ. ಇನ್ನು ಮಂಜುಳಾ ರೆಡ್ಡಿ, ಹರಿಹರನ್, ಅಮೃತ, ಕಿಲ್ಲರ್ ವೆಂಕಟೇಶ್ ಹಾಗು ನೂರಕ್ಕೂ ಹೆಚ್ಚು ಮಕ್ಕಳು ಅಭಿನಯಿಸಿದ್ದಾರೆ. ಜಾನ್ ಛಾಯಾಗ್ರಹಣ ಮತ್ತು ಎ.ಟಿ. ರವೀಶ್​ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net