ಓಟಿಟಿಯಲ್ಲಿ ಬಟರ್​ಫ್ಲೈ ಹಾರುತ್ತಾ?

Butter Fly
Published on

ಬೆಂಗಳೂರು: ಪಾರುಲ್ ಯಾದವ್ ಅಭಿನಯದ ‘ಬಟರ್​ಫ್ಲೈ’ ಚಿತ್ರದ ಬಿಡುಗಡೆಗೆ ಸಿದ್ಧವಾಗಿಯೇ ಹಲವು ತಿಂಗಳುಗಳಾಗಿವೆ. ಒಂದು ವೇಳೆ ಲಾಕ್​ಡೌನ್ ಇರಲಿಲ್ಲ ಎಂದಿದ್ದರೆ, ಇಷ್ಟೊತ್ತಿಗಾಗಲೇ ಈ ಸಿನಿಮಾ ತೆರೆಕಂಡು ಹಳೆಯ ಮಾತಾಗಿರುತ್ತಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಚಿತ್ರಮಂದಿರಗಳನ್ನು ತೆರೆಯುವುದು ಯಾವಾಗ ಎಂದು ಹೇಳುವುದು ಕಷ್ಟ. ಈ ನಡುವೆ ಓವರ್ ದಿ ಟಾಪ್​ನಲ್ಲಿ (ಓಟಿಟಿ) ಚಿತ್ರಗಳನ್ನು ನೇರವಾಗಿ ಬಿಡುಗಡೆ ಮಾಡುವ ಟ್ರೆಂಡ್ ಶುರುವಾಗಿದ್ದು, ‘ಬಟರ್​ಫ್ಲೈ’ ಸಹ ಓಟಿಟಿಯಲ್ಲಿ ಹಾರುತ್ತಾ ಎಂಬ ಪ್ರಶ್ನೆ ಎದುರಾಗಿದೆ.

ಈ ಪ್ರಶ್ನೆಗೆ, ‘ಚಾನ್ಸೇ ಇಲ್ಲ ...’ ಎಂದು ಕಡ್ಡಿ ಮುರಿದಂತೆ ಉತ್ತರಿಸುತ್ತಾರೆ ಆ ಚಿತ್ರದ ನಿರ್ವಪಕರಲ್ಲೊಬ್ಬರಾದ ಪಾರುಲ್. ‘ಓಟಿಟಿಯಲ್ಲಿ ಬಿಡುಗಡೆ ಮಾಡುವ ಯಾವುದೇ ಯೋಚನೆ ಇಲ್ಲ. ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವ ಆಲೋಚನೆ ನಮ್ಮದು. ಕರೊನಾ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಎಲ್ಲ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡುತ್ತಿದ್ದೆವು. ಇದೀಗ ಚಿತ್ರಮಂದಿರ ಯಾವಾಗ ಶುರು ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎನ್ನುತ್ತಾರೆ ಪಾರುಲ್. ಅಷ್ಟಕ್ಕೂ ಈ ಓಟಿಟಿ ಸುದ್ದಿ ಹರಿದು ಬಂದಿದ್ದು ಪಕ್ಕದ ಟಾಲಿವುಡ್​ನಿಂದ. ‘ಬಟರ್​ಫ್ಲೈ’, ತೆಲುಗಿನಲ್ಲಿ ‘ದಟ್ ಈಸ್ ಮಹಾಲಕ್ಷ್ಮೀ’ ಎಂಬ ಹೆಸರಿನಲ್ಲಿ ನಿರ್ವಣವಾಗಿದ್ದು, ತಮನ್ನಾ ಭಾಟಿಯಾ ನಾಯಕಿಯಾಗಿ ನಟಿಸಿದ್ದಾರೆ. ಪ್ರಶಾಂತ್ ವರ್ವ ನಿರ್ದೇಶನದ ಈ ಚಿತ್ರಕ್ಕೂ ಮನು ಕುಮಾರನ್ ಜತೆೆ ಸೇರಿ ಬಂಡವಾಳ ಹೂಡಿದ್ದಾರೆ ಪಾರುಲ್. ಈ ಸಿನಿಮಾ ಓಟಿಟಿಯಲ್ಲಿ ತೆರೆಕಾಣಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದು ಸಹ ಸುಳ್ಳು ಸುದ್ದಿ ಎಂದು ಪಾರುಲ್ ಸ್ಪಷ್ಟನೆ ನೀಡಿದ್ದಾರೆ.

ಬಾಲಿವುಡ್​ನಲ್ಲಿ ಕೆಲವು ವರ್ಷಗಳ ಹಿಂದೆ ತೆರೆಕಂಡು ಸೂಪರ್ ಹಿಟ್ ಆದ ಕಂಗನಾ ರಣಾವತ್ ಅಭಿನಯದ ‘ಕ್ವೀನ್’ ಚಿತ್ರವು ‘ಬಟರ್​ಫ್ಲೈ’ ಆಗಿ ಕನ್ನಡಕ್ಕೆ ಬರುತ್ತಿರುವುದಷ್ಟೇ ಅಲ್ಲ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲೂ ರೀಮೇಕ್ ಆಗಿದೆ. ಕನ್ನಡದಲ್ಲಿ ಪಾರುಲ್, ತೆಲುಗಿನಲ್ಲಿ ತಮನ್ನಾ, ತಮಿಳಿನಲ್ಲಿ ಕಾಜಲ್ ಅಗರವಾಲ್ ಮತ್ತು ಮಲಯಾಳಂನಲ್ಲಿ ಮಂಜಿಮಾ ಮೋಹನ್ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಕನ್ನಡ ಮತ್ತು ತಮಿಳು ಅವತರಣಿಕೆಗೆ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net