

ಕನ್ನಡ ಚಿತ್ರರಂಗದಲ್ಲಿ ಇದೀಗ ಆನಿವರ್ಸರಿಯ ಕಾಲ. ಇತ್ತೀಚೆಗಷ್ಟೇ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ 'ಮೊಗ್ಗಿನ ಮನಸ್ಸು' ಚಿತ್ರ ಬಿಡುಗಡೆಯಾಗಿ 12 ವರ್ಷ ಆಯ್ತು. ಇದು ನಾಯಕ-ನಾಯಕಿಯಾಗಿ ಅವರಿಬ್ಬರ ಮೊದಲ ಚಿತ್ರವಾದ್ದರಿಂದ, ಅವರು ಚಿತ್ರರಂಗಕ್ಕೆ ಬಂದು 12 ವರ್ಷಗಳಾದವು.
ಈಗ ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ್ದಾರೆ. ಅವರ ಅಭಿನಯದ ಮೊದಲ ಚಿತ್ರ ಬಿಡುಗಡೆಯಾಗಿ ಇಂದಿಗೆ 10 ವರ್ಷಗಳಾಗಿವೆ.
ರಕ್ಷಿತ್ ಹೀರೋ ಆಗಿದ್ದು, 'ತುಗ್ಲಕ್' ಚಿತ್ರದ ಮೂಲಕವಲ್ಲವಾ? ಅದು 10 ವರ್ಷ ಪೂರೈಸುವುದಕ್ಕೆ ಇನ್ನೂ ಎರಡು ವರ್ಷಗಳಿವೆ ಎಂಬ ಮಾತು ನಿಜ. ಆದರೆ, 'ತುಗ್ಲಕ್'ನಲ್ಲಿ ಹೀರೋ ಆಗುವುದಕ್ಕಿಂತ ಮುನ್ನವೇ ರಕ್ಷಿತ್, ಒಂದು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದೇ 'ನಮ್ ಏರಿಯಾಲ್ ಒಂದಿನ'. ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್ ಮತ್ತು ಮೇಘನಾ ಗಾಂವ್ಕರ್ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇನ್ನು ರಕ್ಷಿತ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಬಿಡುಗಡೆಯಾಗಿ ಇಂದಿಗೆ ಸರಿಯಾಗಿ 10 ವರ್ಷ.
ಈ 10ನೇ ವಾರ್ಷಿಕೋತ್ಸವವನ್ನು ರಕ್ಷಿತ್ ಸ್ನೇಹಿತರು ಮತ್ತು ಅಭಿಮಾನಿಗಳು, ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಆಚರಿಸುತ್ತಿದ್ದಾರೆ. 'ಸೆನ್ಸೇಶನಲ್ 10 ಇಯರ್ಸ್ ಆಫ್ ರಕ್ಷಿತ್ ಶೆಟ್ಟಿ' ಎಂಬ ಡಿಸ್ಪ್ಲೇ ಪಿಕ್ಚರ್ ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ: ಅಪ್ಪನ ದಾರಿಯಲ್ಲಿ ಮಗ … ನಿರ್ಮಾಣದತ್ತ ನಿಖಿಲ್ ಕುಮಾರ್
ರಿಷಭ್ ಶೆಟ್ಟಿ, ಹೇಮಂತ್ ರಾವ್, ಶೀತಲ್ ಶೆಟ್ಟಿ, ಸಚಿನ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವಾರು ಕಲಾವಿದರು ಮತ್ತು ತಂತ್ರಜ್ಱರು, ರಕ್ಷಿತ್ಗೆ ಈ ಸಂದರ್ಭದಲ್ಲಿ ಶುಭ ಕೋರಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ್ದರ ಬಗ್ಗೆ ಖುಷಿ ವ್ಯಕ್ತಪಡಿಸಿರುವ ರಕ್ಷಿತ್ ಶೆಟ್ಟಿ, ''ನಮ್ ಏರಿಯಾಲ್ ಒಂದಿನ' ಬಿಡುಗಡೆಯಾಗಿ ಇಂದಿಗೆ 10 ವರ್ಷ. ನನ್ನ ವೃತ್ತಿಜೀವನಕ್ಕೆ ಅಡಿಪಾಯ ಹಾಕಿದ ಚಿತ್ರ ಅದು. ನಿನ್ನೆ, ಮೊನ್ನೆಯಷ್ಟೇ ಬಿಡುಗಡೆಯಾದಂತಿದೆ. ಆ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಗಾಂಧಿನಗರದಲ್ಲಿ ಓಡಾಡುತ್ತಿದ್ದು ಇಂದಿಗೂ ನೆನಪಿದೆ. ಇವತ್ತು ಈ ಯಶಸ್ಸು ಕಾಣುವುದಕ್ಕೆ ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಹವೇ ಕಾರಣ' ಎಂದು ರಕ್ಷಿತ್ ಟ್ವೀಟ್ ಮಾಡಿದ್ದಾರೆ.