'ಮುಗಿಲ್ ಪೇಟೆ'ಯ 100ಕ್ಕೂ ಅಧಿಕ ಜನರ ಖಾತೆಗೆ 5,000 ರೂ. ಟ್ರಾನ್ಸ್​ಫರ್; ಚಿತ್ರತಂಡದ ಮಂದಿಗೆ ನಿರ್ಮಾಪಕರ 'ರಕ್ಷಾ' ಕವಚ

Untitled-1
ಮನುರಂಜನ್ ರವಿಚಂದ್ರನ್​, ಖಯಾದು ಲೋಹರ್
Published on

ಬೆಂಗಳೂರು: ಕರೊನಾ ಹಾವಳಿಯಿಂದ ತತ್ತರಿಸಿ ಹೋಗಿರುವವರಿಗೆ ಹಲವರು ತಮ್ಮದೇ ಆದ ರೀತಿಯಲ್ಲಿ ನಾನಾ ಸಹಾಯಗಳನ್ನು ಮಾಡುತ್ತಿದ್ದು ಇದಕ್ಕೆ ಚಿತ್ರರಂಗ ಕೂಡ ಹೊರತಾಗಿಲ್ಲ. ಈ ತೆರನಾದ ನೆರವಿನಲ್ಲಿ ಇದೀಗ ಹೊಸ ಸೇರ್ಪಡೆ ಎಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಅಭಿನಯದ 'ಮುಗಿಲ್ ಪೇಟೆ' ಸಿನಿಮಾ ತಂಡ.

ಭರತ್ ಎಸ್​. ನಾವುಂದ ನಿರ್ದೇಶನದ 'ಮುಗಿಲ್ ಪೇಟೆ' ಚಿತ್ರದಲ್ಲಿ ಮನುರಂಜನ್ ರವಿಚಂದ್ರನ್​ ಹಾಗೂ ಖಯಾದು ಲೋಹರ್ ನಾಯಕ-ನಾಯಕಿಯಾಗಿ ಅಭಿನಯಿಸಿದ್ದು, ಈ ಚಿತ್ರಕ್ಕೆ ನಿರ್ಮಾಪಕಿ ರಕ್ಷಾ ವಿಜಯಕುಮಾರ್ ಬಂಡವಾಳ ಹೂಡಿದ್ದಾರೆ. ಕರೊನಾ ಹಾವಳಿ ಮಧ್ಯೆ ಚಿತ್ರರಂಗದ ಚಟುವಟಿಕೆಯೇ ಬಹುತೇಕ ಸ್ಥಗಿತಗೊಂಡಿದ್ದು, ಬಹಳಷ್ಟು ಕಲಾವಿದರು, ತಾಂತ್ರಿಕ ವರ್ಗದವರು ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಈ ನಡುವೆ ನಮ್ಮ ಸಿನಿಮಾ ತಂಡಕ್ಕೆ ಏನಾದರೂ ಸಹಾಯ ಮಾಡಬೇಕು ಎಂದು ಮುಂದಾಗಿರುವ ನಿರ್ಮಾಪಕರು, ಚಿತ್ರತಂಡದ ನೂರಕ್ಕೂ ಅಧಿಕ ಮಂದಿಗೆ ನಗದು ರವಾನಿಸಿ ಅವರ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ.

'ಮುಗಿಲ್ ಪೇಟೆ' ಚಿತ್ರತಂಡದ ನೂರಕ್ಕೂ ಹೆಚ್ಚು ಮಂದಿಯ ಖಾತೆಗೆ ತಲಾ 5,000 ರೂ. ಟ್ರಾನ್ಸ್​ಫರ್​ ಮಾಡಿಸಿರುವ ರಕ್ಷಾ ವಿಜಯಕುಮಾರ್​ ತಮ್ಮ ತಂಡದ ಸದಸ್ಯರಿಗೆ ಅಭಯ ನೀಡಿದ್ದಾರೆ. ನಿರ್ಮಾಪಕರ ಈ ನೆರವಿನ ಕಾರ್ಯಕ್ಕೆ ನಾಯಕ ನಟ ಮನುರಂಜನ್ ಕೂಡ ಕೈಜೋಡಿಸಿದ್ದಾರೆ. ತಂಡದ ಎಲ್ಲರೂ ಮನೆಯಲ್ಲೇ ಇದ್ದು ಜಾಗರೂಕತೆ ವಹಿಸಬೇಕು ಎಂದು ನಾಯಕ, ನಿರ್ಮಾಪಕ, ನಿರ್ದೇಶಕರು ವಿನಂತಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net