ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂದಿನ ಐಪಿಎಲ್ ಸೀಸನ್ನಲ್ಲಿ ಆಡುತ್ತಾರಾ? ಅಥವಾ ಇಲ್ಲವಾ? ಎಂಬ ಅನುಮಾನ ಕಾಡತೊಡಗಿದೆ. ಐಪಿಎಲ್ 2023ರ ಸೀಸನ್ನಲ್ಲಿ ಮೊಣಕಾಲು ಗಾಯದಿಂದ ಧೋನಿ ಬಳಲುತ್ತಿದ್ದರು. ಗಾಯದ ಸಮಸ್ಯೆಯಿಂದ ಸರಿಯಾಗಿ ಆಡಲು ಸಾಧ್ಯವಾಗದ ಮಹಿ ಟೂರ್ನಿಯ ಬಳಿಕ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವರ್ಷದ ಐಪಿಎಲ್‌ಗೂ ಮುನ್ನ ಅವರು ಫಿಟ್‌ನೆಸ್‌ನತ್ತ ಗಮನ ಹರಿಸಿದರು ಮತ್ತು ಚೇತರಿಸಿಕೊಂಡರು. ಆದರೆ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ, ಈ ಸೀಸನ್ನಲ್ಲಿ ಕೊನೆಯಲ್ಲಿ ಬ್ಯಾಟಿಂಗ್ ಬರುತ್ತಿದ್ದರು. ವಿಕೆಟ್ ನಡುವೆ ರನ್ ಗಳಿಸಲು ಆಗುವ ಕಷ್ಟವನ್ನು ಗಮನದಲ್ಲಿಟ್ಟುಕೊಂಡು ಕೊನೆಯಲ್ಲಿ ಬಂದು ಸ್ಫೋಟಕ ಆಟವಾಡುವುದರೊಂದಿಗೆ ಪ್ರೇಕ್ಷಕರನ್ನು ರಂಜಿಸಿದರು. ಆದರೆ, ಇದೀಗ ಅಭಿಮಾನಿಗಳ ಮನದಲ್ಲಿರುವ ಪ್ರಶ್ನೆ ಏನೆಂದರೆ, ಐಪಿಎಲ್-2025ರಲ್ಲಿ ಧೋನಿ ಆಡುತ್ತಾರಾ? ಅಥವಾ ಇಲ್ಲವಾ? ಎಂಬುದು.
ಐಪಿಎಲ್ 2025 ಸೀಸನ್ಗಿಂತ ಮುಂಚಿತವಾಗಿ ಮೆಗಾ ಹರಾಜು ಇರುವುದರಿಂದ ಚೆನ್ನೈ ಸೂಪರ್ ಕಿಂಗ್ಸ್ ಧೋನಿಯನ್ನು ಉಳಿಸಿಕೊಳ್ಳುತ್ತದೆಯೇ? ಸದ್ಯ ಈ ಕುತೂಹಲ ಎಲ್ಲರಲ್ಲೂ ಮೂಡಿದೆ. ಆದರೂ ಮಹಿ ವಿಷಯದಲ್ಲಿ ಸಿಎಸ್‌ಕೆ ವಿಶೇಷ ಯೋಜನೆ ರೂಪಿಸಿಕೊಂಡಿದೆ ಎಂದು ತಿಳಿದುಬಂದಿದೆ. ಧೋನಿಯನ್ನು ಉಳಿಸಿಕೊಳ್ಳಲು ದೊಡ್ಡ ಬೆಲೆ ತೆರುವ ಬದಲು, ಅವರನ್ನು ಅನ್‌ಕ್ಯಾಪ್ಡ್ ಪಟ್ಟಿಯಲ್ಲಿ ಸೇರಿಸುವ ಮೂಲಕ ಕಡಿಮೆ ಮೊತ್ತಕ್ಕೆ ಅವರನ್ನು ಉಳಿಸಿಕೊಳ್ಳಲು ಸಿಎಸ್‌ಕೆ ಎದುರು ನೋಡುತ್ತಿದೆ ಎಂದು ವರದಿಯಾಗಿದೆ.
ಯಾವುದೇ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ 5 ವರ್ಷಗಳಾಗಿದ್ದರೆ ಅವರನ್ನು ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಗೆ ಸೇರಿಸಲಾಗುತ್ತದೆ. ಇದೀಗ ಸಿಎಸ್‌ಕೆ ಮಹಿಯನ್ನು ಅನ್‌ಕ್ಯಾಪ್ಡ್ ಆಟಗಾರನಾಗಿ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಒಂದು ವೇಳೆ ಇದು ಓಕೆ ಆದರೆ, ಧೋನಿ ಅವರನ್ನು ಕಡಿಮೆ ಬೆಲೆಗೆ ತಂಡದಲ್ಲಿ ಉಳಿಸಿಕೊಳ್ಳಲಿದೆ. ಆದರೆ, ಈ ನಿಯಮವನ್ನು ಸನ್ ರೈಸರ್ಸ್ ಸಹ ಮಾಲಕಿ ಕಾವ್ಯಾ ಮಾರನ್ ಅವರು ಬಲವಾಗಿ ನಿರಾಕರಿಸಿದ್ದಾರೆ.
ಧೋನಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಕಾವ್ಯಾ ಮಾರನ್ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿಯಾಗಿದೆ. ಮಹಿಯಂತಹ ದಿಗ್ಗಜ ಆಟಗಾರ ಹಾಗೂ ನಾಯಕನಿಗೆ ನೀವು ನೀಡುವ ಗೌರವ ಇದೇನಾ? ಎಂದು ಐಪಿಎಲ್ ಮಾಲೀಕರೊಂದಿಗೆ ಬಿಸಿಸಿಐ ಆಯೋಜಿಸಿದ್ದ ಸಭೆಯಲ್ಲಿ ಕಾವ್ಯಾ ಮಾರನ್ ಅವರು ಸಿಎಸ್‌ಕೆ ವಿರುದ್ಧ ಸಿಡಿಮಿಡಿಗೊಂಡರು ಎಂದು ಹೇಳಲಾಗಿದೆ.
ಧೋನಿಯಂತಹ ದಂತಕಥೆಯನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಘೋಷಿಸುವುದು ಗೌರವವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಹಿಯನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಘೋಷಿಸಿ ಅವರನ್ನು ಉಳಿಸಿಕೊಳ್ಳುವುದು ಕೂಡ ಸರಿಯಲ್ಲ. ಬದಲಾಗಿ ಅವರನ್ನು ಹರಾಜಿಗೆ ಬಿಡಬೇಕು ಎಂದು ಕಾವ್ಯಾ ಮಾರನ್ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)
ಭಾರತ-ಲಂಕಾ ನಡುವಿನ ಏಕದಿನ ಪಂದ್ಯ ಟೈ ಆದರೂ ಸೂಪರ್ ಓವರ್ ಏಕೆ ಆಡಿಸಲಿಲ್ಲ? ಇಲ್ಲಿದೆ ಕಾರಣ…
ಮದುವೆ ಬಳಿಕ ಮೊದಲ ಕ್ಷಣ: ಬೆಡ್ರೂಮ್ ವಿಡಿಯೋ ಹಂಚಿಕೊಂಡ ನವಜೋಡಿಗೆ ನೆಟ್ಟಿಗರ ತರಾಟೆ!
ಅನಂತ್ ಅಂಬಾನಿಯ ‘ವಂತಾರಾ’ದಿಂದ ಹೊಸ ಪ್ರಯತ್ನ: ವಿಡಿಯೋ ಸರಣಿ ಮೂಲಕ ಪ್ರಾಣಿ ಸಂರಕ್ಷಣೆ ಜಾಗೃತಿ