ಕೊಲಂಬೋ: ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ (ಆ.02) ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಟೈನಲ್ಲಿ ಅಂತ್ಯಗೊಂಡಿದ್ದು ಗೊತ್ತೇ ಇದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಕಾ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಟೀಮ್ ಇಂಡಿಯಾ ಕೂಡ ನಿಖರವಾಗಿ 230 ರನ್ ಗಳಿಸಿ ಆಲೌಟ್ ಆಯಿತು. ಉಭಯ ತಂಡಗಳು ಸಮಾನ ಅಂಕ ಗಳಿಸಿದ್ದರಿಂದ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು. ಆದರೆ, ಜುಲೈ 30ರಂದು ಈ ಎರಡು ತಂಡಗಳ ನಡುವಿನ ಕೊನೆಯ ಟಿ20 ಪಂದ್ಯ ಟೈ ಆಗಿದ್ದು, ನಂತರ ಸೂಪರ್ ಓವರ್ ನಡೆಸಲಾಯಿತು.
ಆದರೆ, ಮೊದಲ ಏಕದಿನ ಪಂದ್ಯದಲ್ಲಿ ಪಂದ್ಯ ಟೈ ಆದರೂ ಪಂದ್ಯದ ಫಲಿತಾಂಶ ನಿರ್ಧರಿಸಲು ಸೂಪರ್ ಓವರ್ ಏಕೆ ಕರೆಯಲಿಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಕೊಂಚ ನಿರಾಸೆಗೊಂಡಿದ್ದಾರೆ. ಅಷ್ಟಕ್ಕೂ ಸೂಪರ್ ಓವರ್ ಏಕೆ ಆಯೋಜಿಸಿಲ್ಲ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಟಿ20ಯಲ್ಲಿ ಆಯೋಜಿಸಿದ ಮೇಲೆ ಏಕದಿನ ಪಂದ್ಯದಲ್ಲೂ ಸೂಪರ್ ಓವರ್ ಮಾಡಬೇಕಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ, ಅದಕ್ಕೆ ಉತ್ತರ ಐಸಿಸಿ ನಿಯಮಗಳು.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನಿಯಮಗಳ ಪ್ರಕಾರ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಪಂದ್ಯ ಟೈ ಆಗಿದ್ದರೆ ಅದನ್ನು ಟೈ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಸೂಪರ್ ಓವರ್ ನಿರ್ವಹಿಸುವುದಿಲ್ಲ. ಆದರೆ, ಟಿ20 ಪಂದ್ಯ ಟೈ ಆಗಿದ್ದರೆ ಸೂಪರ್ ಓವರ್ ನಡೆಯಲಿದೆ. ಅಲ್ಲದೆ, ಐಸಿಸಿ ಟೂರ್ನಿಗಳು, ಏಷ್ಯಾ ಕಪ್, ತ್ರಿಕೋನ ಸರಣಿಯಂತಹ ಏಕದಿನ ಮಾದರಿ ಪಂದ್ಯಗಳಲ್ಲಿ ಟೈ ಆದರೆ ಸೂಪರ್ ಓವರ್ ನಡೆಯುತ್ತವೆ. ನಿನ್ನೆಯ ಪಂದ್ಯ ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸರಣಿಯ ಭಾಗವಾಗಿತ್ತು, ಆದ್ದರಿಂದ ಯಾವುದೇ ಸೂಪರ್ ಓವರ್ ಆಡಿಸಲಿಲ್ಲ. ಇನ್ನುಳಿದ ಎರಡು ಏಕದಿನ ಪಂದ್ಯಗಳಲ್ಲಿ ಗೆದ್ದವರು ಸರಣಿಯ ವಿಜೇತರಾಗಲಿದ್ದಾರೆ. ಒಂದೊಂದು ಪಂದ್ಯ ಗೆದ್ದರೆ ಸರಣಿ ಸಮಬಲವಾಗಲಿದೆ.
ಇನ್ನೂ ಪಂದ್ಯದ ವಿಷಯಕ್ಕೆ ಬಂದರೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. 101ಕ್ಕೆ 5 ವಿಕೆಟ್ ಕಳೆದುಕೊಂಡರೂ ಕೊನೆಯಲ್ಲಿ ದುನಿತ್ ವೆಲ್ಲಾಲ 67 ರನ್ ಗಳಿಸಿ ಲಂಕಾಗೆ ಆಸರೆಯಾದರು. ಆರಂಭಿಕರಾದ ಪಾತುಮ್ ನಿಶಾಂಕ 56 ರನ್ ಗಳಿಸಿ ಮಿಂಚಿದರು. ಭಾರತದ ಬೌಲರ್‌ಗಳಲ್ಲಿ ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಶಿವಂ ದುಬೆ, ಕುಲದೀಪ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆದರು.
231 ರನ್ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಟೀಮ್ ಇಂಡಿಯಾಗೆ ನಾಯಕ ಹಾಗೂ ಆರಂಭಿಕ ಆಟಗಾರ ರೋಹಿತ್ ಶರ್ಮ ಅತ್ಯುತ್ತಮ ಆರಂಭ ನೀಡಿದರು. ಅವರು 47 ಎಸೆತಗಳಲ್ಲಿ 58 ರನ್ ಗಳಿಸಿದರು. ಕೆ.ಎಲ್. ರಾಹುಲ್ 31 ಮತ್ತು ಅಕ್ಷರ್ ಪಟೇಲ್ 33 ರನ್ ಗಳಿಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತೆಗೆದುಕೊಂಡು ಹೋಗಿದ್ದರು. ಕೊನೆಯಲ್ಲಿ ಶಿವಂ ದುಬೆ ಕೂಡ 25 ರನ್ ಗಳಿಸಿದರು. ಆದರೆ, ಕೊನೆಯಲ್ಲಿ ಬ್ಯಾಟ್ಸ್ಮನ್ಗಳು ವಿಕೆಟ್ ಒಪ್ಪಿಸಿದರಿಂದ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂದ್ಯ ಟೈ ಆಯಿತು. ಭಾರತ 47.5 ಓವರ್‌ಗಳಲ್ಲಿ 230 ರನ್‌ಗಳಿಗೆ ಆಲೌಟ್ ಆಗಿದ್ದರಿಂದ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು. (ಏಜೆನ್ಸೀಸ್)
Things went down to the wire in Colombo as the match ends in a tie!
On to the next one.
Scorecard ▶️ https://t.co/4fYsNEzggf#TeamIndia | #SLvIND pic.twitter.com/yzhxoyaaet
— BCCI (@BCCI) August 2, 2024
ಮದುವೆ ಬಳಿಕ ಮೊದಲ ಕ್ಷಣ: ಬೆಡ್ರೂಮ್ ವಿಡಿಯೋ ಹಂಚಿಕೊಂಡ ನವಜೋಡಿಗೆ ನೆಟ್ಟಿಗರ ತರಾಟೆ!
ಅನಂತ್ ಅಂಬಾನಿಯ ‘ವಂತಾರಾ’ದಿಂದ ಹೊಸ ಪ್ರಯತ್ನ: ವಿಡಿಯೋ ಸರಣಿ ಮೂಲಕ ಪ್ರಾಣಿ ಸಂರಕ್ಷಣೆ ಜಾಗೃತಿ