ತಡೆಯಲು ಯತ್ನಿಸಿದೆವು ಆದ್ರೆ, ಮೈದಾನಕ್ಕೆ ಸಿಂಹದಂತೆ ನುಗ್ಗಿದರು! ಕ್ಯಾಪ್ಟನ್​ 'ಕೂಲ್' ಕಳೆದುಕೊಂಡ ಘಟನೆ ಇದು

dhoni lost coolness
Published on

ನವದೆಹಲಿ: ಕ್ರಿಕೆಟ್ ಲೋಕದ ದಿಗ್ಗಜ, ಟೀಮ್ ಇಂಡಿಯಾ ಕಂಡ ಶ್ರೇಷ್ಠ ನಾಯಕ, ‘ಕ್ಯಾಪ್ಟನ್ ಕೂಲ್’​ (CaptainCool) ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಯಾರಿಗೆ ಗೊತ್ತಿಲ್ಲ ಹೇಳಿ? 28 ವರ್ಷಗಳ ಬಳಿಕ 2011ರಲ್ಲಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ನಾಯಕ ಎಂಬ ಪಟ್ಟ ಪಡೆದಿರುವ ಮಾಹಿ, ಕ್ರಿಕೆಟ್ ಪ್ರೇಮಿಗಳಿಂದ ಹಿಡಿದು ವಯಸ್ಸಾದ ವೃದ್ಧರ ಪ್ರೀತಿ, ಅಭಿಮಾನ ಸಂಪಾದಿಸಿದ್ದಾರೆ. ಕೇವಲ ಏಕದಿನ ವಿಶ್ವಕಪ್​ ಮಾತ್ರವಲ್ಲದೇ ಟಿ20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿಯನ್ನೂ ಗೆದ್ದುಕೊಟ್ಟ ಭಾಗ್ಯವಂತ ಆಟಗಾರ. ಇಷ್ಟೆಲ್ಲಾ ಸಾಧನೆಗೈದ ಧೋನಿ, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬಳಿಕ ಐಪಿಎಲ್​ಗೆ ಮಾತ್ರ ಸೀಮಿತವಾಗಿದ್ದಾರೆ. ವರ್ಷಕ್ಕೊಮ್ಮೆ ನಡೆಯುವ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪರ ಮೈದಾನಕ್ಕಿಳಿಯುವ ಮೂಲಕ ಫ್ಯಾನ್ಸ್​ಗಳಿಗೆ ದರ್ಶನ ನೀಡುವುದು ವಿಶೇಷ.

ಇನ್ನು 2025ರ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ (Chennai Super Kings) ಪರ ಮಾಹಿ ಕಣಕ್ಕಿಳಿಯಲಿದ್ದಾರೋ ಅಥವಾ ಹರಾಜು ಪ್ರಕ್ರಿಯೆಯಿಂದ ನಿಶಬ್ದವಾಗಿ ಹೊರಗುಳಿಯಲಿದ್ದಾರೋ ಎಂಬ ಸದ್ಯ ಪ್ರಶ್ನೆ ಅಭಿಮಾನಿಗಳಲ್ಲಿ ಬೆಂಬಿಡದೆ ಕಾಡುತ್ತಿದೆ. 2008ರಿಂದ ಐಪಿಎಲ್​ನಲ್ಲಿ ಸಿಎಸ್​ಕೆ ತಂಡವನ್ನು ಯಶಸ್ಸಿನತ್ತ ಕೊಂಡೊಯ್ದಿರುವ ಧೋನಿ, ಐದು ಬಾರಿ ನಾಯಕನಾಗಿ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ದಂತಕಥೆಯಾಗಿರುವ ಕ್ಯಾಪ್ಟನ್ ಕೂಲ್​, ತಮ್ಮ ತಾಳ್ಮೆಯನ್ನು ಕಳೆದುಕೊಂಡ ಘಟನೆಗಳು ಸಾಕಷ್ಟಿವೆ. ಆದ್ರೆ, ಕ್ರಿಕೆಟ್ ಪ್ರೇಮಿಗಳಿಗೆ ಹಾಗೂ ಧೋನಿ ಫ್ಯಾನ್ಸ್​ಗಳಿಗೆ ಗೊತ್ತಿರುವುದು ಕೆಲವೇ ಕೆಲವು. ಇಂದಿಗೂ ಮಾಹಿ ಕೋಪಕ್ಕೆ ಒಳಗಾಗದ ಕ್ರಿಕೆಟಿಗ ಎಂದೇ ಎಲ್ಲರೂ ಭಾವಿಸುತ್ತಾರೆ. ಅಸಲಿಗೆ ಎಂ.ಎಸ್​. ಧೋನಿ ಕೋಪ ತಾರಕಕ್ಕೇರಿದ ಘಟನೆಯೊಂದನ್ನು ಟೀಮ್ ಇಂಡಿಯಾದ ವೇಗಿ ಮೋಹಿತ್ ಶರ್ಮ ನೆನಪಿಸಿಕೊಂಡಿದ್ದಾರೆ.

"2019ರಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವೆ ಗೆಲುವಿಗಾಗಿ ಭಾರೀ ಪೈಫೋಟಿ ನಡೆಯುತ್ತಿತ್ತು. ಆರ್​ಆರ್​ ನೀಡಿದ್ದ ಗುರಿಯನ್ನು ಸಿಎಸ್​ಕೆ ಚೇಸಿಂಗ್ ಮಾಡುವಾಗ ಕ್ರೀಸ್​ನಲ್ಲಿ ಮಿಚೆಲ್ ಸ್ಯಾಟ್ನರ್​ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಬೌಲಿಂಗ್ ದಾಳಿ ನಡೆಸುತ್ತಿದ್ದ ಬೆನ್ ಸ್ಟೋಕ್ಸ್​, ಸ್ಯಾಟ್ನರ್​ಗೆ ಫುಲ್ ಟಾಸ್​ ಹಾಕಿದರು. ಇದಕ್ಕೆ ನೋ ಬಾಲ್​ ಸೈರನ್ ಬರಲಿಲ್ಲ, ಅಂಪೈರ್​ ಕೂಡ ಯಾವ ಸಿಗ್ನಲ್​ ಕೊಡಲಿಲ್ಲ. ಇದು ಮಾಹಿ ಅವರ ತಾಳ್ಮೆಯನ್ನು ಪರೀಕ್ಷಿಸಿತು. ಕೆಲವು ನಿಮಿಷಗಳ ಸುಮ್ಮನೆ ಕುಳಿತಿದ್ದ ಧೋನಿ, ಡ್ರೆಸ್ಸಿಂಗ್ ರೂಮ್​ನಲ್ಲಿ ಕೆಲವರೊಂದಿಗೆ ಚರ್ಚಿಸುತ ತಮ್ಮ ಅಸಮಾಧಾನ ಹೊರಹಾಕಿದರು" ಎಂದು ಶರ್ಮ ಹೇಳಿದರು.

"ಅಂದು ನಮ್ಮ ತಂಡ ಡಗ್​ಔಟ್​ ಆಗಿ ಕಂಗಾಲಾಗಿತ್ತು. ಮೊದಲೇ ಈ ವಿಷಯದಿಂದ ಬೇಸರದಲ್ಲಿ ಕುಳಿತಿದ್ದ ಕ್ಯಾಪ್ಟನ್​ ಕೂಲ್​, ಬೆನ್​ ಸ್ಟೋಕ್ಸ್​ ಹಾಕಿದ ನೋ ಬಾಲ್​ ಕಂಡು ತಮ್ಮ ತಾಳ್ಮೆಯನ್ನು ಕಳೆದುಕೊಂಡರು. ತಕ್ಷಣವೇ ಹೆಚ್ಚು ಮಾತನಾಡದ ಮಾಹಿ, ನೇರವಾಗಿ ಮೈದಾನಕ್ಕಿಳಿದು, ಅಂಪೈರ್​ಗಳೊಂದಿಗೆ ವಾಗ್ವಾದ ನಡೆಸಿದರು. ಆ ಸಮಯದಲ್ಲಿ ಸಿಟ್ಟಿಗೆದ್ದ ಧೋನಿ ಸಿಂಹದಂತೆ ಮೈದಾನಕ್ಕೆ ಎಂಟ್ರಿ ಕೊಟ್ಟ ದೃಶ್ಯ ಇಂದಿಗೂ ನನ್ನ ಕಣ್ಣಿನಲ್ಲಿ ಕಟ್ಟಿದಂತಿದೆ" ಎಂದು ಮೋಹಿತ್ ಹೇಳಿದ್ದಾರೆ. ಪ್ರಸ್ತುತ ಗುಜರಾತ್ ಟೈಟನ್ಸ್ ಪರ ಐಪಿಎಲ್​ ಆಡುತ್ತಿರುವ ಮೋಹಿತ್ ಶರ್ಮ, 18ನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನದತ್ತ ಎದುರುನೋಡುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net