ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ 800 ಕೆಜಿ ಪ್ರಾಣಿ ಕೊಬ್ಬು ಸೀಜ್​! ಹೊರಬಿತ್ತು ಬೆಚ್ಚಿಬೀಳಿಸುವ ಮಾಹಿತಿ | Animal Fat

Animal Fat
Published on

ಪಣಜಿ: ತಿರುಪತಿ ಲಡ್ಡು ( Tirupati laddu ) ಪ್ರಸಾದದಲ್ಲಿ ತುಪ್ಪದ ಬದಲಾಗಿ ಪ್ರಾಣಿಗಳ ಕೊಬ್ಬ ( Animal Fat ) ನ್ನು ಬಳಸಿರುವ ಸುದ್ದಿ ದೇಶಾದ್ಯಂತ ಭಾರಿ ಚರ್ಚೆಗೆ ಒಳಗಾಗಿದ್ದು, ಭಕ್ತರ ಆಕ್ರೋಶಕ್ಕೂ ಕಾರಣವಾಗಿದೆ. ಈ ವಿಚಾರವಾಗಿ ಆರೋಪ-ಪ್ರತ್ಯಾರೋಪ ಸರಣಿ ಮುಂದುವರಿದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಇದೀಗ ಬರೋಬ್ಬರಿ 800 ಕೆಜಿ ತೂಕದ ಪ್ರಾಣಿಗಳ ಕೊಬ್ಬ ( Animal Fat ) ನ್ನು ಕಸಾಯಿಖಾನೆ ( Slaughterhouse ) ಯಿಂದ ವಶಕ್ಕೆ ಪಡೆದಿರುವ ಘಟನೆ ಗೋವಾದ ಪಣಜಿಯಲ್ಲಿ ನಡೆದಿದೆ.

ಅಕ್ರಮ ಕಸಾಯಿಖಾನೆಯಿಂದ 800 ಕೆಜಿ ಪ್ರಾಣಿ ಕೊಬ್ಬನ್ನು ವಶಪಡಿಸಿಕೊಳ್ಳಲಾಗಿದೆ. ಗೋವಾದ ಖರೆಬಂದ್‌ನಲ್ಲಿ ಈ ಘಟನೆ ನಡೆದಿದೆ. ಅಸ್ಲಂ ಬೇಪಾರಿ ಮಾಲೀಕತ್ವದ ಕಸಾಯಿಖಾನೆ ನಕಲಿ ತುಪ್ಪ ಉತ್ಪಾದಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ಮಾರ್ಗೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಅಕ್ರಮ ಬಯಲಾಗಿದೆ.

ನಾಲ್ಕು ಅಂತಸ್ತಿನ ಕಟ್ಟಡದ ಅನೈರ್ಮಲ್ಯ ಜಾಗದಲ್ಲಿ ಪ್ರಾಣಿಗಳನ್ನು ಹತ್ಯೆ ಮಾಡಲಾಗುತ್ತಿತ್ತು. ಪ್ರಾಣಿಗಳ ಕೊಬ್ಬು, ದೊಡ್ಡ ಹಗ್ಗಗಳು, ಒಣಗಿದ ಮತ್ತು ಕೊಳೆಯುತ್ತಿರುವ ಮಾಂಸ ತುಂಬಿದ 41 ಕಂಟೇನರ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಪ್ರಾಣಿಗಳ ಕೊಬ್ಬಿನಿಂದ ತುಪ್ಪವನ್ನು ತಯಾರಿಸಿ ಆ ಪ್ರದೇಶದಲ್ಲಿ ಇರುವ ಹೋಟೆಲ್‌ಗಳಿಗೆ ತಲುಪಿಸುತ್ತಿದ್ದರು ಎಂಬ ಭಯಾನಕ ಮಾಹಿತಿ ಹೊರಬಿದ್ದಿದೆ.

ತಿರುಪತಿ ಲಡ್ಡು ವಿವಾದದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ದಾಳಿ ನಡೆಸಿದಾಗ ಭಾರಿ ಹಗರಣ ಬಯಲಾಗಿದೆ. ಮಾಂಸ ಮತ್ತು ಮೂಳೆಯ ನಡುವೆ ಕಂಡುಬರುವ ಕೊಬ್ಬನ್ನು ಹತ್ಯೆಯ ನಂತರ ಮಡಕೆಯಲ್ಲಿ ಸಂಗ್ರಹಿಸಲಾಗುತ್ತದೆ. ಇವುಗಳನ್ನು ನಂತರ ಕರಗಿಸಿ ತಂಪುಗೊಳಿಸಲಾಗುತ್ತದೆ ಮತ್ತು ಮೃದುವಾದ ಬೆಣ್ಣೆಯನ್ನು ಹೋಲುವ ವಸ್ತುವನ್ನು ರೂಪಿಸಲಾಗುತ್ತದೆ. ತುಪ್ಪವನ್ನು ಹೋಲುವ ಮತ್ತು ವಿನ್ಯಾಸವನ್ನು ಹೊಂದಿರುವ ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.

ಇಂತಹ ತುಪ್ಪಗಳನ್ನು ಹೋಟೆಲ್‌ಗಳು ಮತ್ತು ಬೇಕರಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net