

ಆಂಧ್ರಪ್ರದೇಶ: ವಿಶ್ವದ ಮೂಲೆ ಮೂಲಗಳಿಂದ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಆಗಮಿಸುವ ಲಕ್ಷಾಂತರ ಭಕ್ತಾಧಿಗಳು, ಭಗವಂತನ ದರ್ಶನ ಪಡೆಯುವುದು ಎಷ್ಟು ಮುಖ್ಯ ಎಂದು ಭಾವಿಸುತ್ತಾರೋ, ಅಲ್ಲಿ ಕೊಡುವ ಲಡ್ಡು ಪ್ರಸಾದವನ್ನು ಸೇವಿಸುವುದು ಕೂಡ ಅಷ್ಟೇ ಮುಖ್ಯ ಎಂದು ನಂಬುತ್ತಾರೆ. ಪ್ರಸಿದ್ಧ ತಿರುಮಲ ದೇವಾಸ್ಥಾನದಲ್ಲಿ ವಿತರಿಸಲಾಗುತ್ತಿರುವ ಲಡ್ಡುವಿನಲ್ಲಿ ದನದ ಕೊಬ್ಬು ಬಳಸಿರುವುದು ದೃಢ ಎನ್ನಲಾಗಿದೆ. ಆದ್ರೆ, ಈ ಆರೋಪ ಎಷ್ಟು ನಿಜ? ಎಷ್ಟು ಸುಳ್ಳು? ಎಂಬ ಗೊಂದಲ ಮಾತ್ರ ಸದ್ಯ ನಿರಂತರವಾಗಿ ಕಾಡುತ್ತಿದೆ. ಈ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಶೀಘ್ರವೇ ನ್ಯಾಯಾಲಯ ವಿಚಾರಣೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಲಿದೆ.
ಕಳೆದ ಕೆಲವು ವಾರಗಳಿಂದ ತಿರುಪತಿ ಲಡ್ಡುವಿನಲ್ಲಿ ಕಲೆಬೆರಕೆಯಾಗಿದೆ. ತಿಮ್ಮಪ್ಪನ ಪ್ರಸಾದದ ಪಾವಿತ್ರ್ಯತೆ ಹಾಳು ಮಾಡಲಾಗಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದಿವೆ. ಈ ಭಾರೀ ವಿವಾದದ ಮಧ್ಯೆಯೇ ಭಕ್ತರು ಅಧಿಕ ಸಂಖ್ಯೆಯಲ್ಲಿ ತಿರುಪತಿಗೆ ಭೇಟಿ ಕೊಡುತ್ತಿದ್ದು, ಲಡ್ಡುವನ್ನು ಖರೀದಿ ಮಾಡುತ್ತಿದ್ದಾರೆ. ಪ್ರಸ್ತುತ ನಂದಿನ ತುಪ್ಪ ಬಳಕೆಯಾಗುತ್ತಿದ್ದು, ಪ್ರಸಾದದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಲಾಗಿತ್ತು. ಆದ್ರೆ, ಇದೀಗ ಭಕ್ತೆಯೊಬ್ಬರು ಹಂಚಿಕೊಂಡಿರುವ ವಿಡಿಯೋದಲ್ಲಿ, ತಾನು ತಂದಿರುವ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡು ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಸಂಗತಿ ಅಚ್ಚರಿ ಮೂಡಿಸಿದ್ದು, ತಂಬಾಕು ಹೇಗೆ ಬರಲು ಸಾಧ್ಯ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಹಿಳೆ ಹಂಚಿಕೊಂಡಿರುವ ವಿಡಿಯೋ:
ವರದಿಗಳ ಪ್ರಕಾರ, ಮಹಿಳೆ ಇದೇ ಸೆ.19ರಂದು ತಿರುಪತಿಗೆ ಭೇಟಿ ಕೊಟ್ಟಿದ್ದು, ದೇವರ ದರ್ಶನ ಮುಗಿಸಿ ಕೌಂಟರ್ನಿಂದ ಲಡ್ಡು ಪ್ರಸಾದವನ್ನು ಖರೀದಿಸಿ ಮನೆಗೆ ತಂದಿದ್ದಾರೆ. ಆದ್ರೆ, ಪ್ರಸಾದ ತೆರೆದಾಗ ಅದರೊಳಗೆ ತಂಬಾಕು ತುಂಡು ಪತ್ತೆಯಾಗಿದ್ದನ್ನು ಕಂಡು ಭಾರೀ ಅಚ್ಚರಿಗೆ ಒಳಗಾಗಿದ್ದಾರೆ. ದೇವರ ಪವಿತ್ರ ಪ್ರಸಾದವೇ ಕಲುಷಿತಗೊಳ್ಳುವುದನ್ನು ನೋಡಿ ನನ್ನ ಹೃದಯ ಚಿದ್ರಗೊಂಡಿದೆ ಎಂದು ಮಹಿಳೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಲಡ್ಡು ಪ್ರಸಾದ ವಿವಾದ ಬೆಳಕಿಗೆ ಬಂದಿದ್ದು ಹೇಗೆ?
ವೈಎಸ್ಆರ್ಸಿಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ತಿರುಮಲ ತಿರುಪತಿ ಶ್ರೀವೆಂಕಟೇಶ್ವರ ದೇವಸ್ಥಾನದ ಪ್ರಸಾದದ ಲಡ್ಡುಗಳ ತಯಾರಿಕೆಗೆ ಶುದ್ಧ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು. ಆ ಮೂಲಕ ದೇವಸ್ಥಾನದ ಪವಿತ್ರ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಲಾಗಿತ್ತೆಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕಿಡಿಕಾರಿದ ಬಳಿಕ ಈ ವಿವಾದ ಭುಗಿಲೆದ್ದಿತು. ಮಂಗಳಗಿರಿಯಲ್ಲಿ ನಡೆದ ಎನ್ಡಿಎ ಮೈತ್ರಿಕೂಟದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ನಾಯ್ಡು, ಪ್ರಸಾದ ಅಪವಿತ್ರಗೊಳಿಸಿದ ಬಗ್ಗೆ ಹಲವಾರು ಬಾರಿ ದೂರು ನೀಡಲಾಗಿದ್ದರೂ ಕ್ರಮ ಜರುಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಮಾಜಿ ಸಿಎಂ ಜಗನ್ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. (ಏಜೆನ್ಸೀಸ್)